ಕುರಿ ಸಾಕಾಣಿಕೆ ಮಾಡಿ ಕುಬೇರರಾಗಿ!
ನಮಸ್ಕಾರ ರೈತ ಬಾಂಧವರೇ
ನಾವು ಚರ್ಚೆ ಮಾಡಲ್ಪಡುವ ವಿಷಯ ಏನೆಂದರೆ ಕುರಿಗಳ ಸಾಕಾಣಿಕೆ ಮತ್ತು ಅದರ ರೋಗಗಳು ಆಹಾರ ಪದ್ಧತಿ ಈ ಎಲ್ಲಾ ಮಾಹಿತಿಗಳ ಬಗ್ಗೆ ಸ್ವಲ್ಪ ಚರ್ಚಿಸೋಣ. ನಮ್ಮ ನಾಡಿನಲ್ಲಿ ಹಲವಾರು ಯುವ ಸಮುದಾಯ ಹಾಗೂ ರೈತರು ಕೃಷಿಯೊಂದಿಗೆ ಕುರಿ ಆಡು ಮೇಕೆ ಕೋಳಿಗಳನ್ನು ಸಾಕು ಜೀವನ ನಿರ್ವಹಣೆ ಮಾಡುತ್ತಾರೆ ಮತ್ತು ಇದು ಆರ್ಥಿಕವಾಗಿಯೂ ಸಹಕಾರಿ ಆಗುತ್ತದೆ
ಕುರಿ ಸಾಕಾಣಿಕೆಯಿಂದ ಬರುವಂತಹ ಗೊಬ್ಬರ ಮತ್ತು ಉಣ್ಣೆ ಮಾಂಸ ಎಲ್ಲವೂ ಉಪಯುಕ್ತವಾಗಿದೆ
ಜಾನುವಾರು ಅಭಿವೃದ್ಧಿಯಲ್ಲಿ ಇದುವರೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಪ್ರಾಣಿ ಎಂದರೆ ಕುರಿ. ಮನುಷ್ಯನಿಗೆ ಬೇಡವಾದ ವಸ್ತುಗಳನ್ನು ಉಪಯೋಗಿಸಿಕೊಂಡು ಮನುಷ್ಯನಿಗೆ ಉಪಯುಕ್ತವಾದ ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಮತ್ತು ಹಾಲು ಕೊಡುವಂತಹ ಬಹು ಉಪಯುಕ್ತವಾದ ಹಾಗೂ ಕೃಷಿಗೆ ಅವಲಂಬಿತವಾದ ಉಪಕಸುಬೆಂದರೆ ಕುರಿ ಸಾಕಾಣಿಕೆ. ಈ ಉಪಕಸಬು ಹೈನುಗಾರಿಕೆ ನಂತರದ ಸ್ಥಾನ ಪಡೆದಿದೆ.
ನಮ್ಮ ರಾಜ್ಯದ ಯಾವುದೇ ಬಯಲು ಪ್ರದೇಶದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ವ್ಯವಸಾಯಕ್ಕೆ ಯೋಗ್ಯವಲ್ಲದ ಪಾಳುಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕುರಿ ಸಾಕಾಣಿಕೆ ಮುಖ್ಯ ಉಪಕಸುಬಾಗಿದೆ. ಕುರಿ ಸಾಧು ಹಾಗೂ ಸರಳ ಸ್ವಭಾವದ್ದಾಗಿದ್ದು ಸಾಕಾಣಿಕೆಗೆ ಅಷ್ಟೊಂದು ಖರ್ಚು ಮಾಡಬೇಕಾಗಿಲ್ಲ. ಕುರಿಗಳು ಬರಗಾಲದಲ್ಲಿಯೂ ಸಹ ಬದುಕಬಲ್ಲವು, ಹೆಚ್ಚಾಗಿ ಇವು ಮರುಭೂಮಿ ಕುರುಚಲು ಗಿಡದ ಕಾಡುಗಳು, ಬಂಜರುಭೂಮಿ ಮತ್ತು ಹುಲ್ಲು ಬೆಳೆಯುವ ಸ್ಥಳಗಳಲ್ಲಿ ಸಾಕಬಹುದಾದಂತಹ ಪ್ರಾಣಿಗಳು. ಆಧುನಿಕ ತಂತ್ರಜ್ಞಾನ ಮತ್ತು ತಳಿ ಅಭಿವೃದ್ಧಿ ವಿಧಾನಗಳನ್ನು ಆಳವಡಿಸಿದರೆ ಕುರಿಗಳಿಂದ ಹೆಚ್ಚಿನ ಲಾಭ ಪಡೆಯಬಹುದು.
I. ಕರ್ನಾಟಕದಲ್ಲಿನ ಮುಖ್ಯ ಕುರಿ ತಳಿಗಳ ಮಾಹಿತಿ
೧. ಡೆಕ್ಕನಿ ತಳಿ:
ಈ ತಳಿಯು ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಂಡು ಬರುತ್ತವೆ. ಇವು ಕಪ್ಪು ಮಿಶ್ರಿತ ಬೂದಿ ಬಣ್ಣದಿದ್ದು ಅಲ್ಲಲ್ಲಿ ಬಿಳಿ ಮಚ್ಚೆಗಳಿಂದ ಮತ್ತು ಕಂದು ಬಣ್ಣಗಳಿಂದ ಕೂಡಿರುತ್ತವೆ. ಇದರ ಉಣ್ಣೆ ಒರಟಾದ ಕಂಬಳಿ, ಹಾಸುಕಂಬಳಿ ಮಾಡುವುದಕ್ಕೆ ಸೀಮಿತವಾಗಿದೆ. ವರ್ಷಕ್ಕೆ ಸುಮಾರು ೪೦೦-೫೦೦ ಗ್ರಾಂ ಉಣ್ಣೆ ಕೊಡುತ್ತದೆ. ಇದು ಮಧ್ಯಮ ಗಾತ್ರದ ತಳಿಯಾಗಿದ್ದು, ಕಿವಿಗಳು ಸ್ವಲ್ಪ ಉದ್ದವಾಗಿದ್ದು ನೇತಾಡುತ್ತಿರುತ್ತವೆ. ಬಾಲ ಚಿಕ್ಕದು, ಹೆಣ್ಣುಗಳಲ್ಲಿ ಕೊಂಬುಗಳಿರುವುದಿಲ್ಲ. ವಯಸ್ಕ ಟಗರಿನ ತೂಕ ೪೦ ಕಿ. ಗ್ರಾಂ ಮತ್ತು ಹೆಣ್ಣು ಕುರಿಯ ತೂಕ ಸುಮಾರು ೩೦ ಕಿ.ಗ್ರಾಂ ಇರುತ್ತದೆ. ಹೆಣ್ಣು ಕುರಿ ಮರಿಯು ಒಂದು ವರ್ಷಕ್ಕೆ ಬೆದೆಗೆ ಬರುತ್ತದೆ.
೨. ಬನ್ನೂರು ಅಥವಾ ಮಂಡ್ಯ ತಳಿ:
ಇದು ಹೆಚ್ಚಾಗಿ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಸೀಮಿತವಾಗಿದೆ. ಇದು ಮಾಂಸಕ್ಕೆ ಹೆಸರುವಾಸಿಯಾದಂತಹ ತಳಿ. ಈ ತಳಿಯ ಮುಖ್ಯ ಗುಣಗಳೆಂದರೆ ಕಾಲುಗಳು ಗಿಡ್ಡವಾಗಿರುತ್ತವೆ. ಇವು ಹೆಚ್ಚಾಗಿ ಬಿಳಿ ಮತ್ತು ಗೋದಿ ಬಣ್ಣದ್ದಾಗಿರುತ್ತವೆ. ಬಾಲ ಸಣ್ಣಗೆ ತೆಳ್ಳಗಿರುತ್ತದೆ. ತಲೆ, ಕುತ್ತಿಗೆ, ಎದೆ ಭಾಗಗಳು ಬಿಳಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿರುತ್ತವೆ. ಟಗರುಗಳಿಗೆ ಕೊಂಬುಗಳಿರುವುದಿಲ್ಲ. ಕಿವಿ ಉದ್ದವಾಗಿ ಜೋತು ಬಿದ್ದಿರುತ್ತವೆ. ಕೊರಳಲ್ಲಿ ಎರಡು ಸಣ್ಣ ಚರ್ಮದ ತುಂಡುಗಳು ನೇತಾಡುತ್ತಿರುತ್ತವೆ. ಅದಕ್ಕೆ ಟಸೆಲ್ಸ್ (ಕೊರಳಮಲಿ) ಎಂದು ಕರೆಯುತ್ತಾರೆ. ಮೂಗು ಸ್ವಲ್ಪ ರೋಮನ್ ಮೂಗಿನ ತರಹ ಇರುತ್ತದೆ. ವಯಸ್ಕ ಟಗರು ಸುಮಾರು ೩೫ ಕಿಲೋ ಮತ್ತು ಹೆಣ್ಣು ಕುರಿಗಳು ೨೫ ಕಿಲೋ ದೇಹ ತೂಕ ಹೊಂದಿರುತ್ತವೆ.
೩. ಬಳ್ಳಾರಿ ತಳಿ:
ಈ ತಳಿ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಾಗೂ ಧಾರವಾಡದ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ (ಅಂದರೆ ತುಂಗಭದ್ರಾ ನದಿಯ ಪ್ರದೇಶಕ್ಕೆ ಸೀಮಿತ). ಇವು ಕಪ್ಪು ಬಣ್ಣದ ಉಣ್ಣೆಯನ್ನು ಕೊಡುತ್ತವೆ. ಮುಖ ಮತ್ತು ದೇಹ ಕಪ್ಪು ಬಣ್ಣದಿಂದ ಕೂಡಿದ್ದು, ಕಾಲುಗಳು ಉದ್ದವಾಗಿ ಎತ್ತರವಾಗಿರುತ್ತವೆ. ಕಿವಿ ಉದ್ದವಾಗಿ ಜೋತು ಬಿದ್ದಿದ್ದು, ಕಣ್ಣು ಗುಡ್ಡೆ ಸ್ವಲ್ಪ ಉಬ್ಬಿಕೊಂಡು ಮುಂದಕ್ಕೆ ಚಾಚಿಕೊಂಡಿರುತ್ತದೆ. ಟಗರಿಗೆ ಸಣ್ಣದಾದ ಕೊಂಬು ಇರಬಹುದು ಅಥವಾ ಇಲ್ಲದೇ ಇರಬಹುದು. ಕುತ್ತಿಗೆ ಸಣ್ಣದಾಗಿದ್ದು, ದೇಹವು ಉದ್ದವಾಗಿರುತ್ತದೆ ಮತ್ತು ಬಾಲ ಗಿಡ್ಡವಾಗಿರುತ್ತದೆ. ವಯಸ್ಕ ಟಗರುಗಳು ೩೫ ಕಿ. ಗ್ರಾಂ ಮತ್ತು ಹೆಣ್ಣು ಕುರಿ ೨೮ ಕಿ. ಗ್ರಾಂ ದೇಹ ತೂಕವಿರುತ್ತದೆ.
೪. ಹಾಸನ ತಳಿ:
ಈ ತಳಿ ಹಾಸನ ಜಿಲ್ಲೆಗೆ ಸೀಮಿತವಾಗಿದೆ. ಇವು ಕೂಡ ಬಳ್ಳಾರಿ ಮತ್ತು ಡೆಕ್ಕನಿಯಂತೆ ಉಣ್ಣೆ ಹೊಂದಿರುತ್ತವೆ. ಕುರಿಗಳು ಒರಟಾದ ತುಪ್ಪಟವನ್ನು ಹೊಂದಿದ್ದು, ಮುಖ ಕಪ್ಪಾಗಿ ಶರೀರದ ತುಪ್ಪಟವು ಬಿಳಿಯ ಬಣ್ಣದಿಂದ ಕೂಡಿರುತ್ತದೆ. ಟಗರುಗಳಿಗೆ ಕೊಂಬುಗಳಿರುತ್ತವೆ. ಇದರ ಉಣ್ಣೆಯನ್ನು ಕಂಬಳಿ ಮುಂತಾದ ಒರಟಾದ ಬಟ್ಟೆಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ವಯಸ್ಕ ಟಗರು ೨೫ ಕಿ. ಗ್ರಾಂ ಮತ್ತು ಹೆಣ್ಣು ಕುರಿ ೨೨ ಕಿ. ಗ್ರಾಂ ದೇಹ ತೂಕ ಹೊಂದಿರುತ್ತದೆ.
೫. ಟೆಂಗುರಿ (ಕೆಂಗುರಿ)
ಈ ಕುರಿಯು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೇರಳವಾಗಿ ಸಿಗುತ್ತವೆ. ಇವುಗಳ ಬಣ್ಣ ಕಂದು ಬಣ್ಣದ್ದಿದ್ದು, ಸಾಮಾನ್ಯವಾಗಿ ಹಣೆಯ ಮೇಲೆ ಬಿಳಿ ಪಟ್ಟಿ ಇರುತ್ತದೆ ಹೊಟ್ಟೆಯ ಕೆಳಗೆ ಕರಿ ಕೂದಲಿರುವ ಕುರಿಗಳಿಗೆ ಜೋಡ್ತಾ ಎನ್ನುತ್ತಾರೆ. ಟಗರುಗಳಿಗೆ ಕೊಂಬು ದೊಡ್ಡದಿರುತ್ತವೆ. ಹೆಣ್ಣು ಕುರಿಗಳಿಗೆ ಸಾಮಾನ್ಯವಾಗಿ ಕೋಡು ಇರುವುದಿಲ್ಲ, ಇದ್ದರೂ ಚಿಕ್ಕವಿರುತ್ತವೆ. ಈ ಕುರಿಗೆ ಉಣ್ಣೆ ಇರುವುದಿಲ್ಲ. ಹೀಗಾಗಿ
ಇದು ಕೇವಲ ಮಾಂಸಕ್ಕಾಗಿ ಸಾಕುವ ಕುರಿ. ಗಂಡು ಮರಿ ೩ ತಿಂಗಳ ವಯಸ್ಸಿನಲ್ಲಿ ೧೬-೧೮ ಕಿ. ಗ್ರಾಂ ತೂಗುತ್ತವೆ. ಹೆಣ್ಣು ಕುರಿ ೩೫-೪೦ ಕಿ. ಗ್ರಾಂ ತೂಗಿದರೆ, ಟಗರು ೪೫-೫೦ ಕಿ. ಗ್ರಾಂ ತೂಗುತ್ತವೆ.
೬. ಯಳಗ ಕುರಿ ತಳಿ:
ಯಳಗ ಕುರಿಯು ಬಿಳಿಯ ಬಣ್ಣದ್ದಾಗಿದ್ದು ಬಹಳಷ್ಟು ಕುರಿಗಳಲ್ಲಿ ಕಣ್ಣಿನ ಸುತ್ತಲೂ ಕಪ್ಪು ಪಟ್ಟಿಯಿದ್ದು ಮೂಗು ನೇರವಾಗಿರುತ್ತದೆ. ಕೆಲವೊಂದು ಕುರಿಗಳಲ್ಲಿ ಕಂದು ಬಣ್ಣದ ಮಚ್ಚೆಗಳು ಸಹ ಕಾಣಬಹುದು. ಈ ಕುರಿಗಳನ್ನು ಬಾಗಲಕೋಟೆ ಜಿಲ್ಲೆಯ ಬದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ ಹಾಗೂ ಮುಧೋಳ ತಾಲೂಕುಗಳಲ್ಲಿ ಕಾಣಬಹುದು. ಈ ಕುರಿಗೆ ಬೀಳಗಿ ಕುರಿ, ಬಿಳಿ ಕುರಿಯೆಂದು ಕೂಡ ಕರೆಯುತ್ತಾರೆ. ಟಗರುಗಳಿಗೆ ಉದ್ದನೆಯ ಕೋಡುಗಳಿದ್ದು ಹೆಣ್ಣು ಕುರಿಗಳಲ್ಲಿ ಕೋಡುಗಳಿರುವುದಿಲ್ಲ. ಟಗರು ಕುರಿಗಳು ಸುಮಾರು ೫೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಹೆಣ್ಣು ಕುರಿಗಳು ಸುಮಾರು ೩೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಟಗರು ಮರಿಗಳು ಮೂರು ತಿಂಗಳಿಗೆ ೨೧ ಕಿ. ಗ್ರಾಂ ಹಾಗೂ ಕುರಿ ಮರಿಗಳು ೧೯ ಕಿ. ಗ್ರಾಂ ತೂಕ ಪಡೆಯುತ್ತವೆ. ಈ ಕುರಿಗೆ ಉಣ್ಣೆ ಇರುವುದಿಲ್ಲ. ಒರಟು ಬಿಳಿ ಕೂದಲುಗಳಿರುತ್ತವೆ. ಯಳಗ ಕುರಿಗಳು ಅಲೆಮಾರಿಗಳಲ್ಲ.
೭. ಮೌಳಿ ಕುರಿ ತಳಿ:
ಮೌಳಿ ಕುರಿಗಳನ್ನು ವಿಜಯಪುರ ಜಿಲ್ಲೆಯಲ್ಲಿ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾಣಬಹುದು. ಈ ಕುರಿಗಳನ್ನು ಉಣ್ಣೆ ಕುರಿ ಹಾಗೂ ಸಾಂಗೋಲಾ ಕುರಿ ಎಂತಲೂ ಕರೆಯುತ್ತಾರೆ. ಇದರ ಮೂಗು ಗಿಳಿ ಮೂಗಿನಂತಿರುತ್ತದೆ (ರೋಮನ್ ನೋಸ್), ಕಿವಿಗಳು ಉದ್ದವಾಗಿದ್ದು ಜೋತು ಬಿದ್ದಿರುತ್ತವೆ. ಬಾಲ ಉದ್ದವಾಗಿರುತ್ತದೆ. ಈ ಕುರಿಗಳು ಬಿಳಿ ಬಣ್ಣದ್ದಾಗಿದ್ದು ಕಂದು ಪಟ್ಟಿಗಳನ್ನು ಕಾಣಬಹುದು. ಇದು ಒರಟಾದ ಬಿಳಿ ಉಣ್ಣೆಯನ್ನು ಹೊಂದಿದ್ದು ವರ್ಷಕ್ಕೆರಡು ಬಾರಿ ಕತ್ತರಿಸುತ್ತಾರೆ. ಈ ಕುರಿಗಳಲ್ಲಿ ಗಂಡು ಮತ್ತು ಹೆಣ್ಣುಗಳಿಗೆ ಕೋಡುಗಳಿರುವುದಿಲ್ಲ. ಟಗರುಗಳು ಸುಮಾರು ೫೪ ಕಿ.ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಕುರಿಗಳು ಸುಮಾರು ೪೨ ಕಿ.ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಟಗರು ಮರಿಗಳು ಮೂರು ತಿಂಗಳಿಗೆ ೧೯ ಕಿ. ಗ್ರಾಂ ಹಾಗೂ ಕುರಿ ಮರಿಗಳು ೧೭ ಕಿ. ಗ್ರಾಂ ತೂಕ ಪಡೆಯುತ್ತವೆ. ಡಿಸೆಂಬರ್‌ದಿಂದ ಜೂನ್ ತಿಂಗಳವರೆಗೆ ಈ ಕುರಿಗಳು ೧೫೦-೩೦೦ಕಿ.ಮೀ. ವರೆಗೆ ಮೇಯಲು ವಲಸೆ ಹೋಗುತ್ತವೆ.
೮. ಯು.ಎ.ಎಸ್. ತಳಿ:
ಇದು ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಶ್ರಮದಿಂದ ಹೊರತರಲಾದ ಮಿಶ್ರತಳಿ. ಈ ತಳಿ ಮಾಂಸಕ್ಕೆ ಮತ್ತು ಉಣ್ಣೆಗೆ ಹೆಸರುವಾಸಿಯಾಗಿದೆ
ಈ ಮಿಶ್ರತಳಿಯ ಪ್ರಮುಖ ಗುಣಲಕ್ಷಣಗಳೇಂದರೆ ಉಣ್ಣೆಯ ಬಣ್ಣ ಕೆನೆ ಬಣ್ಣ ಅಥವಾ ಮಾಸಲು ಬಿಳಿಯಾಗಿದ್ದು, ಕೊಂಬುಗಳು ಇರುವುದಿಲ್ಲ. ಕಾಲುಗಳು ಗಿಡ್ಡವಾಗಿರುತ್ತವೆ. ಈ ತಳಿಯ ಗಂಡು ಮರಿಗಳು ೬ ತಿಂಗಳಲ್ಲಿ ಸುಮಾರು ೧೬-೧೮ ಕಿ. ಗ್ರಾಂ ತೂಗುತ್ತವೆ. ಮತ್ತು ಉಣ್ಣೆಯ ಇಳುವರಿ ಒಂದು ವರ್ಷಕ್ಕೆ ಸರಾಸರಿ ೭೫೦ ಗ್ರಾಂ ಬರುತ್ತದೆ. ಈ ಉಣ್ಣೆಯು ಕಂಬಳಿಗೆ ಯೋಗ್ಯ ಮಾಂಸದ ಇಳುವರಿ ಶೇ. ೪೫ ರಷ್ಟು ಇರುವುದು. ಈ ತಳಿಯನ್ನು ಕೃಷಿ ಸಂಶೋಧನಾ ಕೇಂದ್ರಗಳಾದ ಹನುಮನಮಟ್ಟಿ ಮತ್ತು ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲನೆ ಮಾಡಲಾಗುತ್ತಿದೆ.
II. ಕುರಿಗಳ ಪಾಲನೆ
• ವಸತಿ
ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕುರಿ ಮನೆಯನ್ನು ಕಟ್ಟಬೇಕು. ಕುರಿ ವಸತಿ ಸೌಕರ್ಯಕ್ಕೆ ಮುಖ್ಯವಾದ ಅಂಶಗಳೇನೆಂದರೆ ನೆಲ ತೇವವಾಗಿರಬಾರದು. ಉತ್ತಮ ಗಾಳಿ, ಬೆಳಕು ಪ್ರವೇಶಿಸುವಂತಿರಬೇಕು. ಅಲ್ಲದೇ ಮಳೆ ನೀರು ಒಳಗೆ ಬಾರದಂತೆ ರಕ್ಷಣೆ ಒದಗಿಸಬೇಕು. ಪ್ರತಿ ಕುರಿಗೆ ೧೦-೧೫ ಚದರ ಅಡಿ ಜಾಗ ಬೇಕಾಗುತ್ತದೆ.
ಆಹಾರ ಮತ್ತು ನೀರು
ಎಲ್ಲಾ ತರಹದ ಹಸಿರು ಸೊಪ್ಪು ಮತ್ತು ಹುಲ್ಲು ಇವುಗಳ ಮುಖ್ಯ ಆಹಾರ. ಕುರಿಗಳು ಮೆಲುಕು ಹಾಕುವ ಪ್ರಾಣಿಗಳು. ಬಿರುಸಾದ ಮೇವನ್ನು ಇಷ್ಟಪಡುವುದಿಲ್ಲ. ಅಲ್ಲದೇ ದ್ವಿದಳ ಮೇವಿನ ಬೆಳೆಗಳಾದ ಉದಾ: ಸ್ಟೈಲೋಸ್ಯಾಂತಸ್ ಇಷ್ಟಪಡುತ್ತದೆ. ಪ್ರತಿದಿನ ಕುರಿಗಳನ್ನು ಕನಿಷ್ಠ ೮ ಗಂಟೆ ಹುಲ್ಲುಗಾವಲಿನಲ್ಲಿ ಬಿಡಬೇಕು.
ಪ್ರತಿದಿನ ೨೫೦-೫೦೦ ಗ್ರಾಂ ಗರ್ಭ ಧರಿಸಿದ ಹಾಗೂ ಹಾಲು ಹಿಂಡುವ ಕುರಿಗಳಿಗೆ ಮತ್ತು ಸಂತಾನಾಭಿವೃದ್ಧಿಗೆ ಬಳಸುವ ಟಗರುಗಳಿಗೆ ೨೫೦ ಗ್ರಾಂ ನಷ್ಟು ದಾಣಿ ಮಿಶ್ರಣ ಕೊಡಬೇಕು.
ಸಂತಾನೋತ್ಪತ್ತಿ
ಸಾಮಾನ್ಯವಾಗಿ ಕುರಿಗಳು ೧೨-೧೪ ತಿಂಗಳಿಗೆ ಪ್ರೌಢಾವಸ್ಥೆಗೆ ಬರುತ್ತವೆ. ಹೆಣ್ಣು ಕುರಿಗಳು ವರ್ಷದಲ್ಲಿ ನಿಯಮಿತ ಋತುವಿನಲ್ಲಿ ಒಂದು ಸಲ ಮಾತ್ರ ಬೆದೆಗೆ ಬರುತ್ತವೆ. ಒಮ್ಮೆ ಫಲ ಕಟ್ಟದಿದ್ದರೆ ಮುಂದೆ ೧೬-೧೮ ದಿನಗಳಲ್ಲಿ ಮತ್ತೆ ಬೆದೆಗೆ ಬರುವವು. ಗರ್ಭ ಧರಿಸಿದ ಕುರಿಗಳು ೫ ತಿಂಗಳುಗಳ (೧೫೫ ದಿವಸಗಳ) ನಂತರ ಮರಿ ಹಾಕುತ್ತವೆ. ಒಂದು ಮರಿ ಹಾಕುವುದು ರೂಢಿ. ಕೆಲವು ಬಾರಿ ಎರಡು ಮರಿಗಳನ್ನು ಹಾಕಬಹುದು. ಒಂದು ಬಲಿತ ಟಗರನ್ನು ಸುಮಾರು ೨೦-೨೫ ಹೆಣ್ಣು ಕುರಿಗಳಿಗೆ ಗರ್ಭ ಧರಿಸಲು ಬಳಸಬಹುದು.
ಬೀಜದ ಟಗರಿನ ಪಾಲನೆ
ಒಳ್ಳೆಯ ಟಗರು ಅರ್ಧ ಕುರಿ ಹಿಂಡಿಗೆ ಸಮ. ಕುರಿ ಹಿಂಡಿನ ಬೆಳವಣಿಗೆ ಟಗರಿನ ಗುಣ ಮತ್ತು ಆದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಉತ್ತಮ ಜಾತಿ ಮತ್ತು ಗುಣಲಕ್ಷಣವುಳ್ಳ ಟಗರನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿದಿನ ೫೦೦ ಗ್ರಾಂ ನಷ್ಟು ದಾಣಿ ಮಿಶ್ರಣವನ್ನು ಕೊಟ್ಟು ಶಕ್ತಿಗುಂದದಂತೆ ನೋಡಿಕೊಳ್ಳಬೇಕು ಪ್ರತಿ ೨ ವರ್ಷಗಳಿಗೊಮ್ಮೆ ಬೀಜದ ಟಗರನ್ನು ಬದಲಿಸಬೇಕು ೫೦ ಕ್ಕಿಂತ ಕಡಿಮೆ ಕುರಿಗಳು ಹಿಂಡಿನಲ್ಲಿದ್ದರೆ ಟಗರುಗಳನ್ನು ದೂರದಿಂದ ಖರೀದಿಸಿ ಉಪಯೋಗಿಸಬೇಕು. ಹಟ್ಟಿಯಲ್ಲಿ ಹುಟ್ಟಿದ ಟಗರನ್ನು ಉಪಯೋಗಿಸಬಾರದು.
ಗರ್ಭ ಧರಿಸಿದ ಕುರಿಗಳ ಪಾಲನೆ
ಕುರಿ ಗರ್ಭಧರಿಸಿರುವುದನ್ನು ಖಚಿತ ಪಡಿಸಿಕೊಂಡು ಅಂತಹ ಕುರಿಗಳನ್ನು ಹಿಂಡಿನಿಂದ ಬೇರ್ಪಡಿಸುವುದು ಉತ್ತಮ. ತುಂಬು ಗರ್ಭವಿರುವ ಕುರಿಗಳನ್ನು ಕೊಟ್ಟಿಗೆಯಲ್ಲಿ ಬಿಟ್ಟು ಹೋಗುವುದು ಸೂಕ್ತ. ಏಕೆಂದರೆ ಕೆಲವು ಬಾರಿ ಟಗರು ಅವುಗಳ ಮೇಲೇರುವುದರಿಂದ ಮತ್ತು ಕಾದಾಡುವುದರಿಂದ ಗರ್ಭಪಾತವಾಗಬಹುದು.
ಮರಿಗಳ ಪಾಲನೆ
ಮರಿ ಹುಟ್ಟಿದ ತಕ್ಷಣ ಅದರ ಮೂಗು, ಬಾಯಿ ಮತ್ತು ಮೈ ಮೇಲಿನ ಮಾಸವನ್ನು ಸ್ವಚ್ಛಗೊಳಿಸಿ. ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಆ ಭಾಗಕ್ಕೆ ಟಿಂಚರ್ ಐಯೋಡಿನ್ ದ್ರಾವಣವನ್ನು ಲೇಪಿಸಬೇಕು. ತಾಯಿಯ ಹಾಲನ್ನು ಕುಡಿಸಬೇಕು. ಸುಮಾರು ೧೫ – ೨ ತಿಂಗಳಿನ ತನಕ ತಾಯಿಯಿಂದ ಬೇರ್ಪಡಿಸಬಾರದು. ಈ ಸಮಯದಲ್ಲಿ ಸ್ವಲ್ಪ ದಾಣಿ ಮಿಶ್ರಣವನ್ನು ಕೊಡಬೇಕು ಗಂಡು ಮರಿಗಳನ್ನು ಕುರಿ ಸಾಕುವವರು ೨-೩ ತಿಂಗಳ ವಯಸ್ಸಿನಲ್ಲಿ ಮಾರುತ್ತಾರೆ. ಇಂತಹ ಮರಿಗಳನ್ನು ೬-೯ ತಿಂಗಳ ಕಾಲ ಭೂರಹಿತರು, ಸಣ್ಣ ಹಿಡುವಳಿದಾರರು ಸಾಕಿ ಮಾರಬಹುದು.ಕುರಿ ಸಾಕುವ ಪದ್ಧತಿಗಳು
ಇವುಗಳಲ್ಲಿ ನಾಲ್ಕು ವಿಧ.
೧. ಕಾಯ್ದಿರಿಸಿದ ಹುಲ್ಲುಗಾವಲುಗಳಲ್ಲಿ ಸಾಕಾಣಿಕೆ
2. ಅರೆ ಸ್ವಯಂಚಾಲಿತ ಕೃಷಿ
೩. ದೊಡ್ಡಿಗಳಲ್ಲಿ ಆಹಾರ, ನೀರು ಪೂರೈಸಿ ಸಾಕುವುದು
೪. ಸಂಚಾರಿ ಪದ್ಧತಿ ಸಾಕಾಣಿಕೆ
ಇವುಗಳಲ್ಲಿ ನಾಲ್ಕನೆಯ ಪದ್ಧತಿಯನ್ನು ನಮ್ಮ ದೇಶದ ಎಲ್ಲಾ ಪ್ರದೇಶಗಳಲ್ಲಿ ಅನುಸರಿಸುತ್ತಾರೆ.
3. ಕುರಿಗಳಿಗೆ ಬರುವ ಸಾಮಾನ್ಯ ರೋಗಗಳು ಹಾಗೂ ನಿಯಂತ್ರಣ
ರೋಗಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು.
೧. ಬ್ಯಾಕ್ಟಿರಿಯಾದಿಂದ ಬರುವ ರೋಗಗಳು:
ಉದಾ: ನೆರಡಿ ರೋಗ, ಗಂಟಲು ಬೇನೆ ಮತ್ತು ಚಪ್ಪೆ ಬೇನೆ. ಈ ರೋಗಗಳ ವಿವರಣೆಯನ್ನು ಅಧ್ಯಾಯ ೪ ರಲ್ಲಿ ಕೊಟ್ಟಿದೆ. ಈ ರೋಗಗಳಲ್ಲದೇ ಕರುಳಿನ ವಿಷ ಬೇನೆಯು ಕುರಿಗಳಲ್ಲಿ ಕಂಡುಬರುತ್ತದೆ.
ಕರುಳಿನ ವಿಷ ಬೇನೆ:
ಇದು ಕ್ಲಾಸ್ಪೀಡಿಯಂ ಫರ್‌ಫಿನ್‌ಜನ್ಸ್ ಗುಂಪಿನ ‘ಡಿ’ ಬ್ಯಾಕ್ಟಿರಿಯಾದಿಂದ ಬರುತ್ತದೆ. ಕುರಿಯ ಕರುಳಿನಲ್ಲಿ ಈ ಸೂಕ್ಷ್ಮಾಣು ಒಂದು ರೀತಿಯ ವಿಷವನ್ನು ಉತ್ಪಾದಿಸಿ ಈ ರೋಗಕ್ಕೆ ಕಾರಣವಾಗುತ್ತದೆ.
ರೋಗ ಲಕ್ಷಣ: ಈ ರೋಗ ಬಂದಾಗ ಕೆಲವು ಸಾರಿ ಯಾವುದೇ ಚಿಹ್ನೆ ತೋರಿಸದೇ ಕುರಿಗಳು ಸಾಯುತ್ತವೆ. ಇನ್ನು ಕೆಲವು ಕುರಿಗಳಲ್ಲಿ ನೊರೆಯಂತೆ ಜೊಲ್ಲು ಸುರಿಸುವುದು. ಹೊಟ್ಟೆ ಉಬ್ಬುವುದು ಮೂರ್ಛ ರೋಗದ ಚಿಹ್ನೆಗಳು, ಓಡಾಡುವುದಕ್ಕೆ ಆಗದೇ ಇರುವುದು. ಕಾಲುಗಳನ್ನು ಒಂದೇ ಕಡೆ ಜಾಡಿಸುತ್ತಿರುವುದು, ಮಂಕಾಗಿರುವುದು ಕಂಡುಬರುತ್ತದೆ.
ಚಿಕಿತ್ಸೆ: ರೋಗ ಲಕ್ಷಣ ಕಂಡ ಕೂಡಲೇ ಪಶುವೈದ್ಯರಿಂದ ಔಷಧೋಪಚಾರ ಮಾಡಿಸಬೇಕು.
ನಿಯಂತ್ರಣ: ಈ ರೋಗವನ್ನು ತಡೆಗಟ್ಟಲು ಪ್ರತಿ ವರ್ಷ ಎರಡು ಬಾರಿ ಪ್ರತಿಬಂಧಕ ಚುಚ್ಚು ಮದ್ದನ್ನು ಜನವರಿ ಹಾಗೂ ಜುಲೈ ತಿಂಗಳಿನಲ್ಲಿ ಕುರಿಗಳಿಗೆ ಹಾಕಿಸಬೇಕು.
೨. ವೈರಸ್‌ನಿಂದ ಬರುವ ರೋಗಗಳು:
ಉದಾ. ದೊಡ್ಡ ರೋಗ ಮತ್ತು ಕಾಲು ಬಾಯಿ ಜ್ವರ. ಈ ರೋಗಗಳ ವಿವರಣೆಯನ್ನು ಅಧ್ಯಾಯ ೪ ರಲ್ಲಿ ಕೊಟ್ಟಿದೆ. ಇವಲ್ಲದೆ ಕುರಿಗಳಲ್ಲಿ ಪಿ.ಪಿ.ಆರ್. ಸಿಡುಬು ರೋಗ, ನೀಲಿ ನಾಲಿಗೆ ರೋಗಗಳು ಕಂಡುಬರುತ್ತವೆ.
ಅ) ಸಿಡುಬು ರೋಗ
ಈ ರೋಗವು ವೈರಸ್‌ನಿಂದ ಬರುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಒಂದು ಸಾರಿ ರೋಗದಿಂದ ಮುಕ್ತಗೊಂಡ ಕುರಿಗಳಿಗೆ ಈ ಸೋಂಕು ಪುನಃ ಬರುವುದಿಲ್ಲ. ರೋಗ ಪೀಡಿತ ಕುರಿಯಿಂದ ಆಹಾರ, ನೀರು, ಗಾಳಿಯ ಮುಖಾಂತರ ಬೇರೆ ಕುರಿಗಳಿಗೆ ಸುಲಭವಾಗಿ ಹರಡುತ್ತದೆ.
ರೋಗ ಲಕ್ಷಣಗಳು: ಜ್ವರ ೧೦೫-೧೦೭ ಫೆ. ತುಪ್ಪಟ ಇಲ್ಲದ ಜಾಗಗಳಾದ ಕಂಕುಳ,
ಪಕ್ಕೆಯಲ್ಲಿ ತೊಡೆಯ ಒಳಭಾಗ, ಹೊಟ್ಟೆಯ ಮೇಲಿನ ಭಾಗ, ಬಾಯಿ, ತುಟಿ ಮತ್ತು ಮೂಗಿನ ಮೇಲೆ ಸಣ್ಣ ಸಣ್ಣ ಗುಳ್ಳೆಗಳಾಗಿ ನಂತರ ತಿಳಿಯಾದ ನೀರು ಸುರಿಯಲು ಪ್ರಾರಂಭವಾಗುತ್ತದೆ. ಅಲ್ಲದೇ ಗಟ್ಟಿಯಾದ ಕೀವಿನಿಂದ ಕೂಡಿರುತ್ತದೆ. ಈ ರೋಗದಿಂದ ಶೇ. ೫೦ ರಷ್ಟು ಕುರಿಗಳು ಸಾಯುತ್ತವೆ.
ಚಿಕಿತ್ಸೆ; ರೋಗ ಲಕ್ಷಣ ಕಂಡ ಕೂಡಲೇ ಪಶುವೈದ್ಯರ ಬಳಿ ಔಷಧೋಪಚಾರ ಮಾಡಿಸಿ,
ನಿಯಂತ್ರಣ: ರೋಗಪೀಡಿತ ಕುರಿಗಳನ್ನು ಹಿಂಡಿನಿಂದ ಬೇರ್ಪಡಿಸಿ ಚಿಕಿತ್ಸೆ ಮಾಡಿ. ಈ ರೋಗವನ್ನು ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ರೋಗ ಪೀಡಿತ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಲಸಿಕೆಯನ್ನು ಹಾಕಿಸಬೇಕು.
ಬ) ನೀಲಿ ನಾಲಿಗೆ ರೋಗ
ರೋಗ ಲಕ್ಷಣ: ಬಾಯಿಯಲ್ಲಿ ಹುಣ್ಣು, ಮೂಗಿನಿಂದ ದ್ರವರೂಪದ ಪದಾರ್ಥ ಸುರಿಯುವುದು, ಕುಂಟುವುದು, ನಾಲಿಗೆ ನೀಲಿ ಬಣ್ಣಕ್ಕೆ ತಿರುಗುವುದು, ನಾಲಿಗೆ ಮೇಲಿನ ಚರ್ಮ ಮುಟ್ಟಿದರೆ ಕಿತ್ತುಕೊಂಡು ಹೊರಬರುತ್ತದೆ. ಆಹಾರ ತಿನ್ನುವುದಕ್ಕೆ ಆಗದೇ ಕುರಿಗಳು ಸಾಯುತ್ತವೆ.
ಚಿಕಿತ್ಸೆ: ಬಾಯಿ ಹುಣ್ಣು ಮತ್ತು ನಾಲಿಗೆಯನ್ನು ಪೂತಿನಾಶಕ ದ್ರಾವಣದಿಂದ ತೊಳೆಯಬೇಕು. ನಂತರ ಔಷಧೋಪಚಾರವನ್ನು ಪಶುವೈದ್ಯರಿಂದ ಮಾಡಿಸಬೇಕು.
ಕೆ) ಪಿ.ಪಿ.ಆರ್
ರೋಗಕ್ಕೆ ಕಾರಣ: ಈ ರೋಗವು ಪ್ಯಾರಮಿಕ್ಸಿ ವೈರಸ್ ಗುಂಪಿಗೆ ಸೇರಿದ ‘ಮಾಲಿ’ ಎಂಬ ಸೂಕ್ಷ್ಮ ವೈರಾಣುಗಳಿಂದ ಕುರಿ ಮತ್ತು ಆಡುಗಳಲ್ಲಿ ಬರುತ್ತದೆ.
ರೋಗ ಹರಡುವಿಕೆ: ಈ ರೋಗವು ಧೂಳು ಮತ್ತು ಶುಷ್ಕ ವಾತಾವರಣಗಳಲ್ಲಿ ಅಥವಾ ರೋಗಗ್ರಸ್ತ ಕುರಿ, ಆಡುಗಳ ಮಲಮೂತ್ರದ ನೇರ ಸಂಪರ್ಕದಿಂದ ಬರುವ ಅಂಟು ರೋಗ, ರೋಗಾವದಿ ೪ ರಿಂದ ೧೦ ದಿನಗಳು.
ರೋಗದ ಚಿಹ್ನೆಗಳು: ವಿಪರೀತ ಜ್ವರ ೧೦೪-೧೦೬° ಫೆ. ಕಣ್ಣು ಮತ್ತು ಮೂಗಿನಿಂದ ಹಳದಿ ಕೀವು ಮಿಶ್ರಿತ ಲೋಳೆ ಕಾಣಿಸಿ, ಕುರಿ, ಆಡು ಮೇವು ಬಿಟ್ಟು ನಿಶ್ಯಕ್ತಿಯಿಂದ ಮಂಕಾಗುತ್ತವೆ. ಮೂಗಿನ ಹೊಳ್ಳೆಗಳೊಳಗೆ ಗಾಯವಾಗಿ, ಲೋಳೆ ಪೊರೆ ಕೊಳೆತು ವಾಸನೆಯಿಂದ ಕೂಡಿರುತ್ತದೆ. ೩-೪ ದಿನಗಳ ನಂತರ ತುಟಿ, ವಸಡು, ದವಡೆಗಳಲ್ಲಿನ ಲೋಳೆ ಪೊರೆಯು ಗಾಯವಾಗಿ, ಕೆಲವೊಮ್ಮೆ ನಾಲಿಗೆ ಮೇಲೆ ಹುಣ್ಣುಗಳಾಗಿ, ಬಿರುಕುಬಿಟ್ಟು ಕೊಳೆತು ಉದುರಿ ಹೋಗುವಂತಾಗುತ್ತದೆ. ಬಾಯಿಯಿಂದ ಧಾರಾಕಾರವಾಗಿ ಕೀವು ಮಿಶ್ರಿತ ನೊರೆಯುಕ್ತ ಜೊಲ್ಲು ಸೋರುತ್ತಿರುತ್ತದೆ.
ಹತೋಟಿ ಕ್ರಮಗಳು
ರೋಗಗ್ರಸ್ತ ಪ್ರಾಣಿಗಳನ್ನು ಬೇರ್ಪಡಿಸಿ ಪೋಟ್ಯಾಷಿಯಂ ಪರಮಾಂಗನೇಟ್ ದ್ರಾವಣದಿಂದ ಮೂಗು ಮತ್ತು ಬಾಯಿಯನ್ನು ಶುಚಿಗೊಳಿಸಬೇಕು. ಅವು ವಾಸಿಸುವ ಜಾಗವನ್ನು ಸೂಕ್ತವಾದ ಕ್ರಿಮಿನಾಶಕ ಸಿಂಪಡಿಸಿ ಚೊಕ್ಕವಾಗಿಡಬೇಕು.
ನೋವು ನಿರೋಧಕ, ಜ್ವರ ನಿಯಂತ್ರಕ ಹಾಗೂ ಆ್ಯಂಟಿಬಯೋಟಿಕ್ಸ್‌ನಿಂದ ಔಷಧೋಪಚಾರ ಮಾಡಿಸಬೇಕು.
ರೋಗಗ್ರಸ್ತ ಪ್ರಾಣಿಗಳನ್ನು ಹೊರಗಡೆ ಮೇಯಲು ಬಿಡದೆ ಮೆತ್ತನೆಯ ಆಹಾರವಾದ ಗಂಜಿ, ಅಂಬಲಿ ಹಾಗೂ ಹುಲ್ಲು ಕೊಡಬೇಕು.
ಪಿ.ಪಿ.ಆರ್. ರೋಗದ ಲಸಿಕೆ ಹಾಕುವುದರಿಂದ ಈ ರೋಗವನ್ನು ತಡೆಗಟ್ಟಬಹುದು.
ಕುರಿಗಳಿಗೆ ವರ್ಷಕ್ಕೆ ೨-೩ ಸಲ ಜಂತಿನ ಔಷಧಿ ಹಾಕಿಸುವದು ಸೂಕ್ತ.
೩ ಅಡಿ ಆಳ ಮತ್ತು ಅಗಲದ ಹಾಗೂ ೫ ಅಡಿ ಉದ್ದದ ಸಿಮೆಂಟಿನ ಗುಂಡಿಯನ್ನು ಮಾಡಿ ಅದರಲ್ಲಿ ನೀರು ತುಂಬಿ ಸರಿಯಾದ ಪ್ರಮಾಣದಲ್ಲಿ ಕ್ರಿಮಿನಾಶಕ ಔಷಧಿಯನ್ನು ಕರಗಿಸಿ, ಕುರಿಗಳನ್ನು ಅದರಲ್ಲಿ ಈಜಿಸಬೇಕು.
ಕೊಟ್ಟಂತಹ ಮಾಹಿತಿ ಎಲ್ಲ ರೈತರಿಗೆ ಅನುಕೂಲವಾಗಲೆಂದು ನಾನು ನೀಡಿದ್ದೇನೆ ಮತ್ತು ನಿರುದ್ಯೋಗ ಯುವಕರು ಹಾಗೂ ಕೆಲವೊಂದು ಕೃಷಿಯೊಂದಿಗೆ ಕುರಿಗಳನ್ನು ಸಾಗಣಿಕೆ ಮಾಡುವುದು ಸೂಕ್ತವಾಗಿದೆ ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡು ತಾವು ತಮ್ಮ ಕುರಿ ಸಾಗಾಣಿಕೆ ಮಾಡಬೇಕೆಂದಲಿ ಈ ಮಾಹಿತಿ ತಮಗೆ ಉಪಯುಕ್ತವಾಗಬಹುದು ಇದರಿಂದ ತಮ್ಮ ಆರ್ಥಿಕ ಆರ್ಥಿಕ ಜೀವನ ಕೂಡ ಸುಗಮವಾಗಿ ಸಾಗಿಸಲು ಅತ್ಯಂತ ಉಪಯುಕ್ತವಾದ ಕುರಿ ಸಾಕಾಣಿಕೆ ಮಾರ್ಗವಾಗಿದೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಸಾಕುವುದು ಬೇಡ ಮೊದಲಿಗೆ ಕೇವಲ ಐದು ಆರು ಕುರಿಗಳನ್ನು ಸಾಕು ಬೇಕು ನಂತರ ನಮಗೆ ಫಲದಾಯಕ ಅನಿಸಿದರೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಸಾಕುವುದು ಸೂಕ್ತ.