ಮಾನವರು ಉಪಯೋಗಿಸುವ ಹಲವಾರು ತರಕಾರಿಗಳಲ್ಲಿ ಅತಿ ಉತ್ತಮವಾದ ತರಕಾರಿ ಎಂದರೆ ಈ ಟಮೋಟೊ ಎಂದು ಹೇಳಬಹುದು ಅಡುಗೆಗೆ ಅತಿ ಉಪಯುಕ್ತವಾದ ಟೊಮೆಟೊ ಟೊಮೆಟೊ ಇಲ್ಲದಿದ್ದರೆ ಅಡಿಗೆಯು ರುಚಿಕರವಾಗಿ ಇರೋದೇ ಇಲ್ಲ ಟೊಮೆಟೋ ಹೊಂದಿದ್ದರೆ ಅಡುಗೆ ರುಚಿಕಟ್ಟಾಗಿ ಆಗುತ್ತದೆ ಬನ್ನಿ ರೈತ ಬಾಂಧವರೇ ಈಗ ನಾವು ಟೊಮೊಟೊ ಬೆಳೆಯುವ ಹಾಗೂ ಅದರ ಕೀಟ ನಿರ್ವಹಣೆ ಅದರ ಬಗ್ಗೆ ತಿಳಿದುಕೊಳ್ಳೋಣ.
ಮಣ್ಣು: ಇದನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು
ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಇದು ಎ, ಬಿ ಹಾಗೂ ಸಿ ಜೀವಸತ್ವಗಳನ್ನು ಒದಗಿಸುತ್ತದೆ.
ಮಣ್ಣು : ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಗೋಡು ಮಣ್ಣು ಈ ಬೆಳೆಗೆ ಸೂಕ್ತ. ತಗ್ಗು ಪ್ರದೇಶ, ನೀರು ನಿಲ್ಲುವ ಮತ್ತು ಆಮ್ಲಯುಕ್ತ ಮಣ್ಣಿನ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಉತ್ತಮ ಬೆಳೆಗೆ ಮಣ್ಣಿನ ರಸಸಾರ 6 ರಿಂದ 7 ಇರಬೇಕು. ಸೊರಗುರೋಗ ಪೀಡಿತ ಮಣ್ಣು ಸೂಕ್ತವಲ್ಲ. ಬಿತ್ತನೆ ಕಾಲ : ವರ್ಷದ ಮೂರೂ ಕಾಲಗಳಲ್ಲಿ ಅಂದರೆ ಜೂನ್-ಜುಲೈ, ಅಕ್ಟೋಬರ್-ನವೆಂಬರ್ ಮತ್ತು ಜನೆವರಿ- ಫೆಬ್ರುವರಿಯಲ್ಲಿ ಬೆಳೆಯಬಹುದು. ವಾರ್ಷಿಕ ಮಳೆ ಪ್ರಮಾಣ 75 ರಿಂದ 90 ಸೆಂ.ಮೀ. ಇರುವಲ್ಲಿ ಹಾಗೂ ಜುಲೈನಿಂದ ಅಕ್ಟೋಬರ್‌ವರೆಗೆ ನಿರ್ದಿಷ್ಟ ಮಳೆ ಬೀಳುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಫಲಪ್ರದವಾಗಿ ಬೆಳೆಯಬಹುದು. ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿ ಕೊಡುವುದಿಲ್ಲ. ಬೇಸಿಗೆಯಲ್ಲಿ (ಜನೆವರಿ-ಫೆಬ್ರುವರಿ) ಎಲೆ ಮುಟುರುರೋಗಕ್ಕೆ ತುತ್ತಾಗುವುದರಿಂದ ಅವಶ್ಯವಿರುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿ ಮಡಿಯಿಂದಲೇ ಪ್ರಾರಂಭಿಸಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಆಗಸ್ಟ್ ಮಧ್ಯದವರೆಗೂ ಮಾಡಬೇಕು.
ಬಿತ್ತನೆ ಕಾಲ:
ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಅಂದರೆ, ಜೂನ್-ಜುಲೈ ಅಕ್ಟೋಬರ್-ನವೆಂಬರ್ ಮತ್ತು ಜನವರಿ-ಫೆಬ್ರವರಿಯಲ್ಲಿ ಬೆಳೆಯುಬಹುದು. ಮಳೆಯಾಶ್ರಿತ ಬೆಳೆಯಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಅಗಸ್ಟ್ ಮಧ್ಯದವರೆಗೂ ಉತ್ತಮ ಕಾಲ.
ತಳಿಗಳು:
1. ಪೂಸಾ ರೂಬಿ :
ಹಣ್ಣುಗಳು ಮಧ್ಯಮ ಗಾತ್ರವಾಗಿದ್ದು ಕೆಂಪು ವರ್ಣವನ್ನು ಹೊಂದಿರುತ್ತವೆ. ಈ ತಳಿ ಸಾಧಾರಣ ಉತ್ತಮ ಇಳುವರಿ ಕೊಡುತ್ತದೆ. ಮಳೆಯಾಶ್ರಯದಲ್ಲಿ ಬೆಳೆಯಲು ಸೂಕ್ತ ತಳಿ.
2. ಮೇಘಾ (ಎಲ್-15) :
ಹಣ್ಣುಗಳು ಮಧ್ಯಮ ಗಾತ್ರ, ದುಂಡನೆಯ ಆಕಾರ ಹೊಂದಿವೆ. ಹೆಚ್ಚಿನ ಉಷ್ಣತೆಯಲ್ಲಿಯೂ ಕೂಡ ಕಾಯಿಕಟ್ಟುವ ಸಾಧ್ಯತೆಯನ್ನು ಹೊಂದಿರುತ್ತದೆ. ಪ್ರತಿ ಹೆಕ್ಟೇರಿಗೆ 25 ರಿಂದ 30 ಟನ್ ಇಳುವರಿ ಕೊಡುವ ಈ ತಳಿ, ಪೂಸಾ ರೂಬಿಗಿಂತ ಶೇ. 43 ರಷ್ಟು ಹೆಚ್ಚು ಇಳುವರಿ ಕೊಡುತ್ತದೆ. ಹಣ್ಣುಗಳನ್ನು ಕೊಯ್ದು ಮಾಡಿದ 8 ರಿಂದ 10 ದಿನಗಳವರೆಗೆ ಕೆಡದಂತೆ ಇಡಬಹುದು.
3. ರೋಮಾ :
ಇದು ಉತ್ತಮ ಇಳುವರಿ ಕೊಡುವ ತಳಿಯಾಗಿದ್ದು ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ.
4. ಅರ್ಕಾ ವಿಕಾಸ್ :
ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, 140 ದಿನಗಳಲ್ಲಿ ಬೆಳೆ ಮುಗಿಯುತ್ತದೆ. ಇದರ ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು (80-90 ಗ್ರಾಂ) ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದನ್ನು ಮಳೆಯ ಆಶ್ರಯದಲ್ಲಿ ಹಾಗೂ ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದು. ಒಂದು ಹೆಕ್ಟೇರಿಗೆ 35-40 ಟನ್ ಇಳುವರಿ ಪಡೆಯಬಹುದು.
5. ಅರ್ಕಾ ಆಭಾ :
ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, 140 ದಿನಗಳಲ್ಲಿ ಬೆಳೆ ಮುಗಿಯುತ್ತದೆ. ಹಣ್ಣುಗಳು ಕಡು ಕೆಂಪು ಬಣ್ಣದಿಂದ ಕೂಡಿದ್ದು, ಸುಮಾರು 75 ಗ್ರಾಂ. ತೂಕವಿರುತ್ತವೆ. ಇದು ದುಂಡಾಣು ಸೊರಗು ರೋಗವನ್ನು ನಿರೋಧಿಸುವ ಶಕ್ತಿಯನ್ನು ಹೊಂದಿದೆ. ಇದನ್ನು ಮಳೆಗಾಲ ಮತ್ತು ಚಳಿಗಾಲಗಳೆರಡಲ್ಲೂ ಬೆಳೆಯಬಹುದು. ಒಂದು ಹೆಕ್ಟೇರಿಗೆ 43 ಟನ್ ಇಳುವರಿ ಬರುತ್ತದೆ.
6. ಅರ್ಕಾ ಅಲೋಕ್ :
ಬೆಳೆಯು 130 ದಿನಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಗಾತ್ರದಲ್ಲಿ (120ಗ್ರಾಂ) ದೊಡ್ಡದಾಗಿದ್ದು ಗಟ್ಟಿಯಾಗಿರುತ್ತವೆ. ಸೊರಗು ರೋಗವನ್ನು ನಿರೋಧಿಸುವ ಶಕ್ತಿ ಇದೆ. ಇದನ್ನು ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಬೆಳೆಯಬಹುದು. ಒಂದು ಹೆಕ್ಟೇರಿಗೆ 46 ಟನ್ ಇಳುವರಿ ಪಡೆಯಬಹುದು.
7. ಅರ್ಕಾ ಆಶಿಶ್ :
ಬೆಳೆಯ ಅವಧಿ 130 ದಿನಗಳು. ಹಣ್ಣುಗಳು ಮೊಟ್ಟೆಯಾಕಾರದಲ್ಲಿದ್ದು, ಗಟ್ಟಿಯಾಗಿರುತ್ತವೆ ಮತ್ತು ಒಳ್ಳೆಯ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಹಣ್ಣು ಒಂದೇ ಸಾರಿ ಕೊಯ್ಲಿಗೆ ಸಿದ್ದವಾಗುತ್ತವೆ. ಇದು ಸಂಸ್ಕರಣೆಗೆ ಸೂಕ್ತವಾದ ತಳಿ. ಇದಕ್ಕೆ ಬೂದಿ ರೋಗವನ್ನು ನಿರೋಧಿಸುವ ಶಕ್ತಿ ಇದೆ. ಹಣ್ಣುಗಳು ಬಿರುಕು ಬಿಡುವುದಿಲ್ಲ. ಇದು ಮಳೆಗಾಲ ಹಾಗೂ ಚಳಿಗಾಲಗಳೆರಡರಲ್ಲೂ ಬೆಳೆಯಲು ಸೂಕ್ತವಾಗಿದೆ. ಒಂದು ಹೆಕ್ಟೇರಿಗೆ 38 ಟನ್ ಇಳುವರಿ ಪಡೆಯಬಹುದಾಗಿದೆ.
8. ಅರ್ಕಾ ಆಹುತಿ :
ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, ಬೆಳೆ 140 ದಿವಸಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಸ್ವಲ್ಪ ಉದ್ದವಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿದ್ದು ಹೆಚ್ಚು ತಿರುಳಿನಿಂದ ಕೂಡಿರುತ್ತವೆ. ಇದು ಸಂಸ್ಕರಣೆಗೆ ಸೂಕ್ತವಾದ ತಳಿ. ಇದನ್ನು ಮಳೆಗಾಲ ಮತ್ತು ಚಳಿಗಾಲ ಎರಡರಲ್ಲೂ ಬೆಳೆಯಬಹುದು. ಒಂದು ಹೆಕ್ಟೇರಿಗೆ 42 ಟನ್ ಇಳುವರಿ ಪಡೆಯಬಹುದು.
9. ಅರ್ಕಾ ಮೇಘಾಲಿ :
ಗಿಡಗಳು ಮಧ್ಯಮ ಬೆಳವಣಿಗೆಯನ್ನು ಹೊಂದಿದ್ದು, ಬೆಳೆ 125 ದಿನಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಮಧ್ಯಮ (65 ಗ್ರಾಂ) ಗಾತ್ರವಾಗಿದ್ದು, ಕಡು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ಮಳೆ ಆಶ್ರಯದಲ್ಲಿ ಬೆಳೆಯಲು ಸೂಕ್ತವಾದ ತಳಿ. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
10. ಸಂಕ್ರಾತಿ :
ಹಣ್ಣುಗಳು ಮಧ್ಯಮ ಗಾತ್ರದಿಂದ ಕೂಡಿದ್ದು ದುಂಡನೆಯಾಕಾರ ಹೊಂದಿವೆ. ಇದೊಂದು ಮಧ್ಯಮ ಅವಧಿಯ ತಳಿ (95- 105 ದಿನಗಳು). ಇದು ಎಲೆ ಮುದುಡು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. ಹೆಕ್ಟೇರಿಗೆ 40-45 ಟನ್ ಇಳುವರಿ ಪಡೆಯಬಹುದು.
11. ನಂದಿ :
ಹಣ್ಣುಗಳು ಮಧ್ಯಮ ಗಾತ್ರದ್ದಾಗಿರುತ್ತವೆ. ಇದು ಅಧಿಕ ಇಳುವರಿ ಕೊಡುತ್ತದೆ. ಎಲೆ ಮುಟುರು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. ಪ್ರತಿ ಹೆಕ್ಟೇರಿಗೆ 40-45 ಟನ್ ಇಳುವರಿ ಪಡೆಯಬಹುದು.
12. ವೈಭವ್ :
ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಈ ತಳಿಯ ಹಣ್ಣುಗಳು ದೂರ ಸಾಗಾಣಿಕೆಗೆ ಸೂಕ್ತವಾದ ಗುಣಗಳನ್ನು ಹೊಂದಿರುತ್ತವೆ. ಹೆಕ್ಟೇರಿಗೆ 45-50 ಟನ್ ಇಳುವರಿ ಕೊಡುವ ಸಾಮರ್ಥ್ಯವನ್ನು ಹೊಂದಿದ್ದು ಎಲೆ ಮುದುಡು ನಂಜು ರೋಗ ನಿರೋಧಕ ಶಕ್ತಿ ಪಡೆದಿದೆ. ಈ ತಳಿಯು ದುಂಡಾಣು ಸೊರಗುರೋಗ ಹಾಗೂ ಅಧಿಕ ಉಷ್ಣತೆ ತಡೆಯುವ ಶಕ್ತಿಯನ್ನೂ ಸಹ ಹೊಂದಿರುತ್ತದೆ.
13. ಪಿ.ಟಿ.ಆರ್. 6 (ಕೃಷ್ಣ) :
ಹಣ್ಣುಗಳು ಮಧ್ಯಮ ಗಾತ್ರ ಹಾಗೂ ಕಡುಗೆಂಪು ಬಣ್ಣ ಹೊಂದಿದ್ದು, ದೂರದ ಸಾಗಾಣಿಕೆಗೆ ಯೋಗ್ಯವಾಗಿವೆ. ಅಧಿಕ ಇಳುವರಿ ಕೊಡುವ ತಳಿಯಾಗಿದ್ದು ಹುಳಿಯುಕ್ತ ಸಿಹಿಯಾದ ಹಣ್ಣುಗಳು ಸಂಸ್ಕರಣೆಗೆ ಸೂಕ್ತವಾಗಿವೆ. ಈ ತಳಿಯು ಆರಂಭದಲ್ಲಿ ಬರುವ ಅಂಗಮಾರಿ ಮತ್ತು ಎಲೆ ಮುರುಟು ರೋಗಗಳಿಗೆ ಮಧ್ಯಮ ನಿರೋಧಕ
ಶಕ್ತಿ ಹೊಂದಿದೆ. ಆರ್ಕಾ ಆಶಿಷಗಿಂತಲೂ ಶೇ. 20ರಷ್ಟು ಹೆಚ್ಚು ಇಳುವರಿ ಕೊಡುತ್ತದೆ.
ಸಂಕರಣ ತಳಿಗಳು:
1. ಆರ್ಕಾ ಅನನ್ಯ :
ಅಧಿಕ ಇಳುವರಿ ಕೊಡುವ ಸಂಕರಣ ತಳಿಯಾಗಿದ್ದು, ಎಲೆ ಮುದುಡು ಹಾಗೂ ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಪಡೆದಿದೆ. ಹಣ್ಣುಗಳು ಗುಂಡಾಗಿದ್ದು ಗಟ್ಟಿಯಾಗಿರುತ್ತವೆ. ಕಾಯಿಗಳು ಹಣ್ಣಾದಾಗ ಕಡು ಕೆಂಪು ಬಣ್ಣಕ್ಕೆ ತಿರುಗುತ್ತವೆ. 140 ದಿನಗಳಲ್ಲಿ ಪ್ರತಿ ಹೆಕ್ಟೇರಿಗೆ ಸುಮಾರು 65 ರಿಂದ 70 ಟನ್ ಇಳುವರಿ ಕೊಡಬಲ್ಲದು.
2. ಅರ್ಕಾ ರಕ್ಷಕ್ :
ಅಧಿಕ ಇಳುವರಿ ನೀಡುವ ಈ ಸಂಕರಣ (ಎಫ್ 1 ಹೈಬ್ರಿಡ್) ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು ನಂಜುರೋಗ, ದುಂಡು ರೋಗಾಣುವಿನ ಸೊರಗು ರೋಗ ಹಾಗೂ ಎಲೆಚುಕ್ಕೆ ರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯು ದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತವೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲನೆಯ ಕಟಾವು ಮಾಡಬಹುದು. ಹಣ್ಣುಗಳು ಚೌಕಾಕಾರದಲ್ಲಿ – ಗುಂಡಾಗಿದ್ದು ಪ್ರತಿ ಹಣ್ಣಿನ ತೂಕ ಸರಾಸರಿ 80 ರಿಂದ 90ಗ್ರಾಂ ಇರುತ್ತವೆ. ಹಣ್ಣುಗಳು ದಟ್ಟ ಕೆಂಪು ಬಣ್ಣ ಹೊಂದಿದ್ದು ತುಂಬಾ ಗಟ್ಟಿಯಾಗಿದ್ದು ಬಹಳ ದಿನಗಳವರೆಗೆ ಸಾಮಾನ್ಯ ವಾತಾವರಣದಲ್ಲಿ ಕೆಡದಂತೆ ಇಡಬಹುದು (ಕಟಾವು ಮಾಡಿದ 20 ರಿಂದ 25 ದಿನಗಳು). ಈ ತಳಿಯು ಸಂಸ್ಕರಣೆಗೆ ಹಾಗೂ ತಾಜಾ ಮಾರುಕಟ್ಟೆಗೆ ಸೂಕ್ತವಾಗಿದ್ದು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಈ ಸಂಕರಣ ತಳಿಯು ಪ್ರತಿ ಹೆಕ್ಟೇರಿಗೆ 75 ರಿಂದ 80 ಟನ್ ಸರಾಸರಿ ಇಳುವರಿಯನ್ನು 140 ರಿಂದ 145 ದಿವಸಗಳಲ್ಲಿ ನೀಡುತ್ತದೆ.
3. ಅರ್ಕಾ ಸಾಮ್ರಾಟ್ :
ಅಧಿಕ ಇಳುವರಿ ನೀಡುವ ಈ ಸಂಕರಣ (ಎಫ್ 1 ಹೈಬ್ರಿಡ್) ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು ನಂಜುರೋಗ, ದುಂಡು ರೋಗಾಣುವಿನ ಸೊರಗು ರೋಗ ಹಾಗೂ ಎಲೆಚುಕ್ಕೆ ರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯು ದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತವೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲನೇ ಕಟಾವು ಮಾಡಬಹುದು. ಹಣ್ಣುಗಳು ಗುಂಡಾಗಿದ್ದು ಪ್ರತಿ ಹಣ್ಣಿನ ತೂಕ ಸರಾಸರಿ 90 ರಿಂದ 100 ಗ್ರಾಂ ಇರುತ್ತದೆ. ಹಣ್ಣುಗಳು ದಟ್ಟ ಕೆಂಪು ಬಣ್ಣ ಹೊಂದಿದ್ದು, ಗಟ್ಟಿಯಾಗಿದ್ದು ಬಹಳ ದಿನಗಳವರೆಗೆ ಸಾಮಾನ್ಯ ವಾತಾವರಣದಲ್ಲಿ ಕೆಡದಂತೆ ಇಡಬಹುದು.(ಕಟಾವು ಮಾಡಿದ 20 ರಿಂದ 25 ದಿನಗಳು). ಈ ತಳಿಯು ತಾಜಾ ಮಾರುಕಟ್ಟೆಗೆ ಸೂಕ್ತವಾಗಿದ್ದು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಈ ಸಂಕರಣ ತಳಿಯು ಪ್ರತಿ ಹೆಕ್ಟೇರಿಗೆ 80 ರಿಂದ 85 ಟನ್ ಸರಾಸರಿ ಇಳುವರಿಯನ್ನು 140 ರಿಂದ 150 ದಿವಸಗಳಲ್ಲಿ ನೀಡುತ್ತದೆ.
ಬೇಸಾಯ ಕ್ರಮಗಳು:
ಸಸಿ ಮಡಿ ತಯಾರಿಕೆ: ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 7.5
ಮೀ ಉದ್ದ, 1.2 ಮೀ ಅಗಲ ಮತ್ತು 10 ಸೆಂ ಮೀ ಎತ್ತರದ 10 ಮಡಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪ್ರತಿ ಮಡಿಗೆ 3-4 ಬುಟ್ಟಿ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ, 2-3 ಕೆಜಿ ಎರೆಗೊಬ್ಬರ ಮತ್ತು 9-10 ಕೆಜಿ ಬೇವಿನ ಹಿಂಡಿ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು. ಸುಮಾರು ಒಂದು ಚದುರ ಮೀಟರ್ ಸಸಿ ಮಡಿಯ ಪ್ರದೇಶಕ್ಕೆ ಒಂದು ಲೀಟರ್ ನೀರಿನಲ್ಲಿ 5-10 ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು ಬೆರೆಸಿ ರೋಸ್ ಕ್ಯಾನ್ ಮೂಲಕ ಮಡಿಗಳನ್ನು
ಚೆನ್ನಾಗಿ ನೆನಸಬೇಕು (10 ಮಡಿಗಳಿಗೆ 450-900ಗ್ರಾಂ ಟ್ರೈಕೋಡರ್ಮಾ ಪುಡಿ
ಬೇಕಾಗುತ್ತದೆ) ಬಿತ್ತುವ ಮೊದಲು ಬೀಜಗಳನ್ನು 10ಗ್ರಾಂ ಟ್ರೈಕೋಡರ್ಮಾ, 5 ಗ್ರಾಂ ಸುಡೊಮೊನಾಸ್ ಒಂದು ಕೆಜಿ ಬೀಜಕ್ಕೆ 10-20 ಮಿಲೀ ನೀರಿನಲ್ಲಿ ಬೆರೆಸಿ ಅಂಟು ದ್ರಾವಣವನ್ನು ಮಾಡಿ ಉಪಚರಿಸಬೇಕು. ಇದರಿಂದ ಸಸಿ ಮಡಿಯಲ್ಲಿ ಸಸಿ ಸಾಯುವುದನ್ನು ಹತೋಟಿ ಮಾಡಬಹುದು. ನಂತರ 7.5 ಸೆಂ ಮೀ ಅಂತರದಲ್ಲಿ ಅರ್ಧ ಸೆಂ ಮೀ ಆಳದ ಗೆರೆಗಳನ್ನು ಕಡ್ಡಿ ಮೂಲಕ ಮಾಡಿ ಈ ಗೆರೆಗಳಲ್ಲಿ ಬೀಜಗಳನ್ನು ಒಂದೊಂದಾಗಿ ಉದುರಿಸಬೇಕು. ಆ ಮೇಲೆ ಎರೆಗೊಬ್ಬರದಿಂದ ತೇಳುವಾಗಿ ಮುಚ್ಚಿ ಒಣ ಹುಲ್ಲಿನಿಂದ ಮಡಿಗಳನ್ನು ಪೂರ್ತಿಯಾಗಿ ಮುಚ್ಚಬೇಕು. ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ರೋಸ್ ಕ್ಯಾನ್ ಮೂಲಕ ನೀರನ್ನು ಕೊಡಬೇಕು. ಬೀಜ ಹಾಕಿ ಒಂದು ವಾರದಲ್ಲಿ ಮೊಳಕೆ ಬರುತ್ತದೆ. ಮೊಳಕೆ ಬಂದ ಕೂಡಲೇ ಹುಲ್ಲಿನ ಪದರು ತೆಗೆಯಬೇಕು. ಹೀಗೆ ಮಾಡಿದ ಸಸಿಗಳು 3-4 ವಾರಗಳಲ್ಲಿ ನಾಟಿಗೆ ಸಿದ್ದವಾಗುತ್ತವೆ.
ಮಡಿಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ: ಸಸಿಗಳು ಮೊಳಕೆ ಬಂದ ಕೂಡಲೇ 3 ಗ್ರಾಂ
ತಾಮ್ರದ ಆಕ್ಸಿಕ್ಲೋರೈಡ್ ಆಮ್ಲ 1 ಲೀಟರ್ ನೀರಿನಲ್ಲಿ ಕರಗಿಸಿ ಮಡಿಗಳ ಮೇಲೆ ಚೆನ್ನಾಗಿ ಸಿಂಪಡಿಸಿ ನೆನೆಸಬೇಕು. ಒಂದು ವಾರದ ಮೇಲೆ ಮಡಿಗಳಿಗೆ ಶೇಕಡ 5 ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಸಸಿ ಮಡಿಗಳನ್ನು 40 ಮೆಶ್ ಇರುವ ನೈಲಾನ್ ಪರದೆಯಿಂದ ಪೂರ್ತಿಯಾಗಿ ಮುಚ್ಚುವುದರಿಂದ ಮಲ್ಲೇ ರೋಗವನ್ನು ಹರಡುವ ಬಿಳಿ ನೋಣ ಭಾದೆಯನ್ನು ಕಡಿಮೆ ಮಾಡಬಹುದು.
ನಾಟಿ ಮಾಡುವುದಕ್ಕೆ ಮೊದಲು ಸಸಿಗಳ ಬೇರುಗಳನ್ನು ಅಜಟೋಬ್ಯಾಕ್ಟರ್ (200 ಗ್ರಾಂ) ರಂಜಕ ಕರಗಿಸುವ ಬ್ಯಾಕ್ಟಿರಿಯಾ (200ಗ್ರಾಂ) ಟ್ರೈಕೊಡರ್ಮಾ (200 ಗ್ರಾಂ) ಮತ್ತು ಸುಡೊಮೊನಾಸ್ ಪುರೊಸೆನ್ಸ್ (200 ಗ್ರಾಂ) ನ್ನು ಮಿಶ್ರಮಾಡಿ ತಯಾರಿಸಿದ ಸ್ಥರಿಯಲ್ಲಿ 20- 30 ನಿಮಿಷಗಳ ಕಾಲ ಅದ್ದಿ / ತೋಯಿಸಿ ನಾಟಿ ಮಾಡಬೇಕು.
ನಾಟಿ ಮಾಡುವುದು : ಮುಖ್ಯ ಭೂಮಿಯನ್ನು ಉಳುಮೆ ಮಾಡಿ ಹೆಂಟೆಗಳನ್ನು ಒಡೆದು,
ಭೂಮಿಯನ್ನು ಸಿದ್ಧವಾಗಿಡಬೇಕು. ನಿರ್ದಿಷ್ಟ ಪಡಿಸಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, 1.5 ಟನ್ ಎರೆಗೊಬ್ಬರ ಮತ್ತು 200 ಕೆಜಿ ಬೇವಿನ ಹಿಂಡಿಯನ್ನು ಬಿತ್ತನೆಗೆ 20-25 ದಿನಗಳ ಮೊದಲು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ ತೆಳುವಾಗಿ ನೀರನ್ನು ಕೊಟ್ಟು 45 ಸೆಂ ಮೀ ಅಂತರದಲ್ಲಿ ಬದುವಿನ ಒಂದು ಪಕ್ಕದಲ್ಲಿ ಪ್ರತಿ ಗುಣಿಗೆ ಒಂದು ಸಸಿಯಂತೆ ನಾಟಿ ಮಾಡಬೇಕು. ಮಳೆಯಾಶ್ರಿತ ಬೆಳೆಯಲ್ಲಿ 1.0 ಮೀ ಅಂತರದ ಸಾಲುಗಳಲ್ಲಿ 60 ಸೆಂ ಮೀ ಗೆ ಒಂದರಂತೆ 45 ಸೆಂ ಮೀ ವ್ಯಾಸದ ಪಾತಿಗಳನ್ನು ತಯಾರಿಸಿ ಕೊಳ್ಳಬೇಕು. ಪಾತಿಗೆ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಮತ್ತು 1.5 ಟನ್ ಎರೆಗೊಬ್ಬರ, 200 ಕೆಜಿ ಬೇವಿನ ಹಿಂಡಿಯನ್ನು ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ನಂತರ ಸಸಿಗಳನ್ನು ಪಾತಿಗಳ ಒಂದು ಬದಿಯಲ್ಲಿ ನಾಟಿ ಮಾಡಬೇಕು.
ನೀರಾವರಿ ಮತ್ತು ಅಂತರ ಬೇಸಾಯ
ನೀರಾವರಿ ಬೆಳೆ :
ಹವಾಗುಣ ಮತ್ತು ಭೂಮಿಯ ಗುಣಧರ್ಮಕ್ಕನಗುಣವಾಗಿ 5 ರಿಂದ 7 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು.
ಗಿಡಗಳಿಗೆ ಕಡ್ಡಿ ಆಧಾರ ಕೊಡುವುದು : ಹೈಬೀಡ್ ತಳಿಗಳಿಗೆ ಎಲ್ಲಾ ಕಡೆ ರೈತರು ಕಡ್ಡಿ ಕಟ್ಟಿಯೇ ಬೆಳೆ ತೆಗೆಯುತ್ತಾರೆ. ಇದಲ್ಲದೆ ಸುಮಾರು 9 ಅಂಗುಲ ಎತ್ತರದವರೆಗೆ ಯಾವುದೇ ಎಲೆಗಳು ಇಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಎಲೆಗಳು ಮತ್ತು ಕಾಯಿಗಳು ಭೂಮಿಗೆ ತಾಗಿ ಕೊಳೆಯುವ ಸಂಭವ ಕಡಿಮೆಯಾಗುತ್ತದೆ. ನಿರ್ಬಂಧಿತ ತಳಿಗಳಿಗೆ 4 ಅಡಿ ಮತ್ತು ಅನಿರ್ಬಂಧಿತ ತಳಿಗಳಿಗೆ 7 ಅಡಿ ಎತ್ತರದ ಕೋಲುಗಳನ್ನು ಉಪಯೋಗಿಸಬೇಕು. 5-6 ಗಿಡಗಳಿಗೊಂದರಂತೆ ಈ ಕಡ್ಡಿಗಳನ್ನು ಹೂಳಬೇಕು. ಈ ಕಡ್ಡಿಗಳ ಮೇಲೆ 1 ಅಡಿ ಅಂತರದಲ್ಲಿ ಅಡ್ಡವಾಗಿ ಬೇರೆ ಕಡ್ಡಿಗಳನ್ನು ಕಟ್ಟಬೇಕು. ಈ ಕಡ್ಡಿಗಳಿಗೆ ಗಿಡಗಳನ್ನು ದಾರದಿಂದ ಕಟ್ಟಬೇಕು. ಈ ಕೆಲಸವನ್ನು ನಾಟಿ ಮಾಡಿ 4 ವಾರಗಳಾದ ಮೇಲೆ ಮಾಡುವುದು ಉತ್ತಮ. ಗಿಡ ದೊಡ್ಡದಾಗುತ್ತಾ ಪ್ರತಿ ಗಿಡಕ್ಕೆ ಆಧಾರ ಕೊಡಲು ಒಂದೊಂದು ಕಡ್ಡಿ ಕೊಟ್ಟರೆ ಒಳ್ಳೆಯದು. ಈ ರೀತಿ ಕಡ್ಡಿ ಕಟ್ಟುವುದರಿಂದ ಔಷಧಿ ಸಿಂಪಡನೆ, ಕಾಯಿ ಕೀಳುವುದು ಸುಲಭವಾಗುತ್ತದೆ.
ಜೀವಾಮೃತ ಮತ್ತು ಪಂಚಗವ್ಯ ಬಳಕೆ:
:
1}ಪಂಚಗವ್ಯ:
ಶೇ 3 ರ ದ್ರಾವಣವನ್ನು ಪ್ರತಿ ಎಕರೆಗೆ 100 ರಿಂದ 250 ಲೀ ನೀರಿನಲ್ಲಿ ಬೆರೆಸಿ ಹೂ ಬಿಡುವ ಸಮಯದಲ್ಲಿ ಮತ್ತು ನಂತರ 30 ದಿನಗಳ ಅಂತರದಲ್ಲಿ 3 ಸಾರಿ ಸಿಂಪಡಣೆ ಮಾಡ ಬೇಕು.
ನಿರಾವರಿ ಬೆಳೆಗೆ ಪಂಚಗವ್ಯ ದ್ರಾವಣವನ್ನು ಎಕರೆಗೆ 200 ಲೀ ನಂತೆ ಹೂ ಬಿಡುವ ಸಮಯದಲ್ಲಿ ನೀರಿನ ಜೊತೆಗೆ ಸಹ ಕೊಡಬೇಕು.
:
2}ಜೀವಾಮೃತ
ಪ್ರತಿ ಎಕರೆಗೆ 200 ಲೀ ಜೀವಾಮೃತವನ್ನು 30 ದಿನಗಳ ಅಂತರದಲ್ಲಿ 2-3 ಬಾರಿ ನೀರಿನೊಂದಿಗೆ ಹಾಯಿಸುವುದು
ಸಸ್ಯ ಸಂರಕ್ಷಣೆ
ಕೀಟಗಳು: ಜಿಗಿಹುಳು, ಹಣ್ಣು ಕೊರೆಯುವ ಹುಳು, ಗೊಣ್ಣೆಹುಳು ಮತ್ತು ಬಿಳಿ ನೊಣ, ನಾಗಮುದ್ರೆ ಸುರಂಗದ ಹುಳ ಮತ್ತು ನುಸಿ
ರೋಗಗಳು: ಸಸಿ ಮಡಿಯಲ್ಲಿ ಸಸಿ ಸಾಯುವುದು, ಬೂದಿ ರೋಗ, ಎಲೆ ಚುಕ್ಕೆ ರೋಗ, ಎಲೆ ಚುಕ್ಕೆ ರೋಗ, ಎಲೆ ಕೊಳೆ ರೋಗ, ಪ್ಯುಸೇರಿಯಂ ಸೊರಗು ರೋಗ, ದುಂಡಾಣು ಸೊರಗು ರೋಗ, ಗಂಟು ಬೇರು ಜಂತು, ಎಲೆ ಮುರುಟು ನಂಜು ರೋಗ, ಚುಕ್ಕೆ ಸೊರಗು ನಂಜು ರೋಗ, ಹಣ್ಣು ಕೊಳೆ ರೊಗ ಮತ್ತು ಕಾಯಿ ಚುಕ್ಕೆ ರೋಗ
3}ಕಾಯಿ ಕೊರಕ:
ಹಣ್ಣು ಕೊರೆಯುವ ಹುಳದ ಹತೋಟಿಗಾಗಿ ಪ್ರತಿ 16 ಸಾಲು ಟೊಮೊಟೊ ಬೆಳೆ ನಂತರ ಒಂದು ಸಾಲು 45 ದಿನಗಳ ಆಫ್ರಿಕನ್ ಟಾಲ್ ಎಲ್ಲೇ ತಳಿಯ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿ ಕಾಯಿ ಕೊರಕ ಕೀಟಗಳು ಚೆಂಡು ಹೂ ಗಿಡಕ್ಕೆ ಅಕರ್ಷಿತವಾಗಿ ಮೊಟ್ಟೆಗಳನ್ನು ಇಡುತ್ತವೆ. ಚೆಂಡು ಹೂಗಳನ್ನು 2-3 ದಿನಗಳಿಗೊಮ್ಮೆ ಕಟಾವು ಮಾಡಿ.
ಕಾಯಿ ಕೊರಕ ಕೀಟದ ಸಂಖ್ಯೆಯ ಸಮೀಕ್ಷೆಗಾಗಿ ಮತ್ತು ಸಾಮೂಹಿಕ ಹತ್ಯೆಗಾಗಿ ಎಕರೆಗೆ 2-3 ಲಿಂಗಾರ್ಷಕ ಬಲೆಗಳನ್ನು ಬಳಸಬೇಕು. ಬೆಳೆಯ ಮಟ್ಟದಿಂದ ಬಲೆಯ ಎತ್ತರ ಕನಿಷ್ಠ ಒಂದು ಅಡಿ ಇರಬೇಕು. ಒಂದು ಬಲೆಯಿಂದ ಇನ್ನೊಂದು ಬಲೆಗೆ ಸುಮಾರು 100 ಮೀ ಕನಿಷ್ಠ ಅಂತರವಿರಬೇಕು. ಲಿಂಗಾಕರ್ಷಕ ನಳಿಕೆಗಳನ್ನು 15-20 ದಿನಗಳಿಗೊಮ್ಮೆ ಬದಲಾಯಿಸಬೇಕು.
ಬ್ಯಾಸಿಲಸ್ ಕುರಿನ್ದ್ರಿಯನ್ಸಿಸ್ (ಬಯೊಲೆಪ್ / ಡೈಪೆಲ್ ಮತ್ತು 0.5 – 1 ಕೆಜಿ) ಕಾಯಿ ಶುರುವಾದಾಗ ಮತ್ತು 15 ದಿನಗಳ ನಂತರ ಸಿಂಪಡಣೆ ಮಾಡಬೇಕು
ಹೂ ಬರುವ ಸಮಯದಲ್ಲಿ (ನಾಟಿ ಮಾಡಿ 20 ದಿನಗಳಾಗಿರುವಾಗ) ಒಳ್ಳೆ (2 % ರಷ್ಟು ಎಣ್ಣೆ ಇರುವ) ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸಿ ಸಾಲು ಮಾಡಬೇಕು.
ನಾಟಿ ಮಾಡಿದ 28, 35, ಮತ್ತು 42 ದಿನಗಳಾಗಿರುವಾಗ ಸಾಯಂಕಾಲ ಎಚ್. ಎನ್. ಪಿ.
ವಿ (100 ಎಲ್. ಇ ಪ್ರತಿ ಎಕರೆಗೆ) ಸಿಂಪಡಣೆ ಮಾಡಬೇಕು (2 % ರಷ್ಟು ಬೆಲ್ಲ ಮತ್ತು 0.5
ಮಿ ಲಿ ಅಂಟು ಸೇರಿಸಿ). ಕಾಯಿ ಕೊರಕ ಹುಳುವಿರುವ ಕಾಯಿಗಳನ್ನು ಹುಡುಕಿ ಕಿತ್ತು, ಕೀಟ ಸಹಿತ ನಾಶ ಮಾಡಬೇಕು.
ಹೊಂಗೆ ಅಥವಾ ಬೇವಿನ ಸಾಬೂನಿನ ದ್ರಾವಣವನ್ನು 1 ಲೀ ನೀರಿನಲ್ಲಿ 5 ಗ್ರಾಂ ಕರಗಿಸಿ. ಎಲೆಯ ಕೆಳಭಾಗ ಚೆನ್ನಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು.
ಹಣ್ಣು ಕೊರಕಕ್ಕೆ ನುಮೇರಿಯಾ ರಿಲೈ ಪ್ರತಿ ಲೀಟರ್‌ಗೆ 2 ಗ್ರಾಂ ನಂತೆ ನೀರಿನಲ್ಲಿ ಮಿಶ್ರಣ ಮಾಡಿ ಶೇ 0.2 ಟ್ರೈನ್ 80 ರ ಜೊತೆಗೆ ಸಿಂಪಡಣೆ ಮಾಡಬೇಕು
1}ರಸಹೀರುವ ಕೀಟಗಳು
ಬೀಜ ಮೊಳಕೆ ಬಂದ 15 ದಿನಗಳಾಗಿರುವಾಗ ಶೇ 4 ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಿ. ಇದರಿಂದ ರಸ ಹೀರುವ ಕೀಟಗಳನ್ನು ಹತೋಟಿ ಮಾಡಬಹುದು.
ನಾಟಿ ಮಾಡಿದ 15 ದಿನಗಳ ನಂತರ ಶೇ 4 ರ ಬೇವಿನ ಬೀಜದ ಕಷಾಯ ಅಥವಾ ಶೇ 1 ರ ಬೇವಿನ ಸೊಪ್ಪು ಅಥವಾ ಹೊಂಗೆ ಸೊಪ್ಪಿನ ರಸವನ್ನು ಸಿಂಪಡಣೆ ಮಾಡಬೇಕು. ಇದರಿಂದ ರಂಗೋಲಿ ಹುಳು, ನುಸಿ, ಬಿಳಿ ನೊಣ ಮತ್ತು ಜಿಗಿ ಹುಳುಗಳ ಹತೋಟಿ ಮಾಡಬಹುದು
ಹಳದಿ ಬಣ್ಣದ ಹಾಳೆ / ತಗಡಿಗೆ ಔಡಲ ಎಣ್ಣೆಯನ್ನು ಹಚ್ಚಿ ಗಾಳಿಯ ವಿರುದ್ಧ ದಿಕ್ಕಿಗೆ ಇಡುವುದರಿಂದ ಎಲೆ ಸುರಂಗ ಕೀಟದ ಪ್ರೌಢ ಕೀಟವನ್ನು ಆಕರ್ಷಿಸಿ ಕಡಿಮೆ ಮಾಡಬಹುದು
ಪ್ರತಿ ಎಕರೆಗೆ 4,000 – 8,000 ಹೇನು ಸಿಂಹಗಳನ್ನು ಬಿಡುಗಡೆ ಮಾಡಬೇಕು. ಈ ಪರಭಕ್ಷಕ ಕೀಟ ಹೆಲೆಕೋವರ್ಪ ಕೀಡೆಯ ಮೊಟ್ಟೆ ಹಾಗೂ ಮರಿಗಳನ್ನು, ಹೇನು, ಫ್ರಿಪ್ಸನುಶಿ, ಬಿಳಿನೋಣ ಮುಂತಾದ ರಸ ಹೀರುವ ಕೀಟಗಳನ್ನು ತಿಂದು ನಾಶ ಮಾಡುತ್ತದೆ.
ಹೊಂಗೆ ಅಥವಾ ಬೇವಿನ ಸಾಬೂನಿನ ದ್ರಾವಣವನ್ನು 1 ಲೀ ನೀರಿನಲ್ಲಿ 5 ಗ್ರಾಂ ಕರಗಿಸಿ ಎಲೆಯ ಕೆಳಭಾಗ ಚೆನ್ನಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು
2}ಎಲೆ ಮುದುಡು ರೋಗ / ಮಲ್ಲೆರೋಗ:
ನಂಜು ರೋಗ ಅಥವಾ ಎಲೆ ಮುರುಡು ರೋಗದ ಹತೋಟಿಗೆ ಸಸಿ ಮಡಿಯಲ್ಲಿ 40 ಮೇಶ್ ಬಿಳಿ ಬಣ್ಣದ ನೈಲಾನ್ ಬಲೆಯನ್ನು ಉಪಯೋಗಿಸಬೇಕು. ಇದರಿಂದ
ರೋಗವನ್ನು ಹರಡುವ ಬಿಳಿ ನೊಣಗಳನ್ನು ನಿಯಂತ್ರಿಸಿ ರೊಗ ಬಾರದಂತೆ /
ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದು
ಎಲೆ ಮುದುಡು / ಮಲ್ಲೆ ರೋಗ ಬಂದಿರುವ ಗಿಡಗಳನ್ನು ರೊಗ ಬಂದ ತಕ್ಷಣ ಕಿತ್ತು ನಾಶ ಮಾಡಬೇಕು
• ರೋಗ ನಿರೋಧಕ ತಳಿಗಳನ್ನು ಬೆಳೆಯುವುದು ಉದಾ: ಸಂಕ್ರಾಂತಿ, ನಂದಿ ಮತ್ತು ವೈಭವ್
3}ದುಂಡಾಣು ಸೊರಗು ರೋಗ
ನಾಟಿ ಮಾಡುವಾಗ ಒಳ್ಳೆ ವಾಸನೆ ಇರುವ ಬೇವಿನ ಹಿಂಡಿಯನ್ನು (8 % ರಷ್ಟು ಎಣ್ಣೆ ಇರುವ) ಒಂದು ಎಕರೆಗೆ 100 ಕೆಜಿ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಿ ಸಾಲು ಮಾಡಬೇಕು. ಮಣ್ಣಿಗೆ ಹಿಂಡಿಯನ್ನು ಸೇರಿಸುವುದರಿಂದ ಮಣ್ಣಿನಲ್ಲಿರುವ ಉಪಯುಕ್ತ ಶಿಲೀಂದ್ರ ಹಾಗೂ ದುಂಡಾಣುಗಳ ಸಂಖ್ಯೆ ಹೆಚ್ಚಿ ಸೊರಗು ರೋಗ ಹಾಗೂ ಬುಡ ಕೊಳೆ ತರುವ ಶಿಲೀಂದ್ರ ಹಾಗೂ ದುಂಡಾಣು ಜೀವಿಗಳ ಸಂಖ್ಯೆ ಕುಗ್ಗಿಸುತ್ತದೆ
ದುಂಡಾಣು ಸೊರಗು ರೊಗದಿಂದ ಬಾಡಿದ ಗಿಡಗಳನ್ನು ಬುಡ ಸಹಿತ ತೆಗೆದು ಹಾಕಬೇಕು.
• ರೋಗ ನಿರೋಧಕ ತಳಿಗಳನ್ನು ಬೆಳೆಯುವುದು ಉದಾ : ಅರ್ಕಾ ಅಭಿಜಿತ್, ಅರ್ಕಾ ಅಲೋಕ್
• ಸಸಿಗಳ ಬೇರುಗಳನ್ನು ನಾಟಿ ಮಾಡುವುದಕ್ಕೆ ಮುಂಚೆ ಸುಡೊಮೊನಾಸ್ ಪ್ಲೊರೊಸೆನ್ಸ್‌ನ
ಸ್ಥರಿಯಲ್ಲಿ 30 ನಿಮಿಷ ಅದ್ದಿ / ನೆನೆಸಿ ನಾಟಿ ಮಾಡಬೇಕು ಪ್ಯುಸೇರಿಯಂ ಸೊರಗು ರೋಗ : ಸಸಿಗಳ ಬೇರುಗಳನ್ನು ನಾಟಿ ಮಾಡುವುದಕ್ಕೆ ಮುಂಚೆ
ಟ್ರೈಕೊಡರ್ಮಾ ಸ್ಲರಿಯಲ್ಲಿ 30 ನಿಮಿಷ ನೆನೆಸಿ ನಾಟಿ ಮಾಡಬೇಕು
ಕೊಯ್ದು ಮತ್ತು ಇಳುವರಿ : ನಾಟಿ ಮಾಡಿದ 10-12 ವಾರಗಳ ನಂತರ ಈ ಬೆಳೆಯು
ಕೊಯ್ಲಿಗೆ ಸಿದ್ಧವಾಗುತ್ತದೆ. ತಳಿ ಹಾಗೂ ಕಾಲಗಳಿಗನುಸಾರವಾಗಿ 6-8 ವಾರಗಳವರೆಗೆ ಕೊಯ್ದು ಮುಂದುವರೆಯುವುದು. ಪ್ರತಿ ಹೆಕ್ಟೇರಿಗೆ 15,000 ದಿಂದ 20,000 ಟನ್ ಹಣ್ಣುಗಳನ್ನು ಪಡೆಯಬಹುದು. ಸಂಕರಣ ತಳಿಗಳಲ್ಲಿ 45,000 ರಿಂದ 70,000 ಟನ್ ಹಣ್ಣುಗಳನ್ನು ಪಡೆಯಲು ಸಾಧ್ಯ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ
ಸಂಪರ್ಕಿಸಿ : 08352-230758