ಆಹಾರದ ಘಟಕಗಳು ಹಾಗೂ ಅವುಗಳ ಕೊರತೆಯಿಂದ ಕಂಡುಬರುವ ದೋಷಗಳು ಮತ್ತು ನಿವಾರಣೆ
ಆಹಾರವು ಎಲ್ಲ ಜೀವಿಗಳು ಜೀವಿಸಿರಲು ಅತೀ ಅವಶ್ಯವಾಗಿ ಬೇಕಾಗಿರುವಂತಹ ಒಂದು ವಸ್ತು. ಪಾಣಿಗಳ ದೇಹದ ಬೆಳವಣಿಗೆ, ಹಾಲು, ಮಾಂಸ, ತತ್ತಿ ಹಾಗೂ ಉಣ್ಣೆ ಉತ್ಪಾದನೆ, ವಂಶವೃದ್ಧಿ ಇವೆಲ್ಲ ಚಟುವಟಿಕೆಗಳು ಆಹಾರವನ್ನು ಅವಲಂಬಿಸಿರುತ್ತವೆ. ಅನೇಕ ಪೌಷ್ಟಿಕಾಂಶಗಳು (ಆಹಾರದ ಘಟಕಗಳು ಅಥವಾ ನೂಟ್ರಿಯಂಟ್ಸ್) ಸೇರಿ ಆಹಾರವಾಗುತ್ತದೆ. ಈ ಆಹಾರದ ಘಟಕಗಳಾವುವೆಂದರೆ :
ನೀರು:
. ಸಸಾರಜನಕ (ಪ್ರೋಟಿನ್) ಪದಾರ್ಥಗಳು
ಪಿಷ್ಟ / ಶರ್ಕರ (ಕಾರ್ಬೋಹೈಡ್ರೆಟ್) ಪದಾರ್ಥಗಳು
• ಕೊಬ್ಬು (ಫ್ಯಾಟ್) ಪದಾರ್ಥಗಳು
• ಖನಿಜಾಂಶಗಳು / ಲವಣಗಳು (ಮಿನರಲ್ಸ್) ಹಾಗೂ
• ಜೀವಸತ್ವಗಳು / ಅನ್ನಾಂಗಗಳು (ವಿಟ್ಯಾಮಿನ್ಸ್)
ಪ್ರಾಣಿಗಳಿಗೆ ಕೊಡುವ ಆಹಾರವು ಮೇಲೆ ಹೇಳಿದ ಎಲ್ಲ ಘಟಕಗಳನ್ನು ಸರಿಯಾದ ಪ್ರಾಮಾಣದಲ್ಲಿ ಹೊಂದಿದ್ದಾಗ ಪ್ರಾಣಿಗಳಲ್ಲಿ ಶರೀರ ಕ್ರಿಯೆ ಸರಿಯಾಗಿ ನಡೆದು, ಅವುಗಳು ಆರೋಗ್ಯದಿಂದಿದ್ದು, ಹೆಚ್ಚು ಹೆಚ್ಚು ಉತ್ಪಾದನೆ ಮಾಡುತ್ತವೆ.
ಆಹಾರದ ಘಟಕಗಳು ಶರೀರದಲ್ಲಿ ತಮ್ಮದೇ ಆದ ಕೆಲಸವನ್ನು ನಿರ್ವಹಿಸುತ್ತವೆ. ಅಕಸ್ಮಾತ್ತಾಗಿ ಯಾವುದೇ ಕಾರಣದಿಂದ ಯಾವುದಾದರೊಂದು ಘಟಕದ ಕೊರತೆ ಆಹಾರದಲ್ಲಿ ಕಂಡು ಬಂದರೆ ತಕ್ಷಣ ಶರೀರದಲ್ಲಿ ಆ ಘಟಕ ಮಾಡಬೇಕಾದ ಕಾರ್ಯ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಕಾರ್ಯಗಳಲ್ಲಿ ವ್ಯತ್ಯಯ ಕಂಡು ಪ್ರಾಣಿಗಳ ಆರೋಗ್ಯ ಕೆಡುವುದು ಹಾಗೂ ಉತ್ಪಾದನೆ ಕುಂಠಿತವಾಗುವುದು.
ಆದುದರಿಂದ, ಆಹಾರದ ಘಟಕಗಳ (ಪೌಷ್ಟಿಕಾಂಶಗಳ) ಕೊರತೆ ಹಾಗೂ ಅವುಗಳಿಂದ ಕಂಡು ಬರುವ ಲಕ್ಷಣಗಳ ಜ್ಞಾನವು ಪ್ರಾಣಿಗಳ ಸಾಕಾಣಿಕೆಯಲ್ಲಿ ಹೆಚ್ಚು ಲಾಭವನ್ನು ಪಡೆಯಲು ಅನುಕೂಲವಾಗುತ್ತದೆ.
ಯಾವ ಕ್ರಮದಲ್ಲಿ ನೀರು ಕೊಡುವದು:
ಪ್ರಾಣಿಗಳ ದೇಹ ರಚನೆಯಲ್ಲಿ ನೀರು ಅತಿ ಹೆಚ್ಚಿನ ಭಾಗದಲ್ಲಿದೆ. ಹೊಸದಾಗಿಹುಟ್ಟಿದ ಕರುಗಳ ಶರೀರದಲ್ಲಿ ಶೇ. ೭೫ ಭಾಗ ಹಾಗೂ ದೊಡ್ಡದಾದ ಪ್ರಾಣಿಗಳಲ್ಲಿ ಶೇ. ೫೫ ಭಾಗ ನೀರಿರುತ್ತದೆ. ಆದುದರಿಂದ, ನೀರು ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ಎಲ್ಲ ಪ್ರಾಣಿಗಳಿಗೂ ಬೇಕಾಗಿರುವುದು ಸಹಜ.
ಕೊರತೆಯ ಲಕ್ಷಣಗಳು:
ಪ್ರಾಣಿಗಳು ಸುಂದಾಗಿರುತ್ತವೆ /ಮಂಕಾಗಿರುತ್ತವೆ. ಮೂಗು ಒಣಗಿರುತ್ತದೆ, ಕಣ್ಣು ಗುಡ್ಡೆಗಳು ಒಳಗೆ ಹೋಗಿರುತ್ತವೆ, ಚರ್ಮವು ಒಣದಾಗಿರುತ್ತದೆ. ನೀರಿನ ಕೊರತೆ ಹೆಚ್ಚಾದಂತೆ ಪ್ರಾಣಾಪಾಯದ ಸಂಭವ ಹೆಚ್ಚಾಗಿರುತ್ತದೆ, ಪ್ರಾಣಿಗಳು ಆಹಾರದ ಕೊರತೆಯನ್ನು ಸ್ವಲ್ಪ ಹೆಚ್ಚು ಕಾಲ ತಡೆದುಕೊಳ್ಳಬಹುದು, ಆದರೆ ನೀರಿನ ಕೊರತೆ ಹೆಚ್ಚಾದಲ್ಲಿ ಪ್ರಾಣ ಹಾನಿಯುಂಟಾಗುತ್ತದೆ.
ನಿವಾರಣೋಪಾಯ
ಜಾನುವಾರುಗಳಿಗೆ ಅವಶ್ಯವಿರುವಾಗ ಸಾಕಷ್ಟು ಪ್ರಮಾಣದಲ್ಲಿ ಕುಡಿಯಲು ಸ್ವಚ್ಚವಾದ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕು. ದಿನದಲ್ಲಿ ಕನಿಷ್ಟ ಮೂರು ನಾಲ್ಕು ಬಾರಿಯಾದರೂ ತಂಪಾದ ಸ್ವಚ್ಛ ನೀರನ್ನು ಕೊಡಬೇಕು ಒಂದು ದೊಡ್ಡ ಆಕಳು ದಿನವೊಂದಕ್ಕೆ ೩೦-೪೦ ಲೀಟರ್, ಎಮ್ಮೆ ೫೦-೬೦ ಲೀಟರ್, ಕುರಿ ಅಥವಾ ಆಡು ೫-೬ ಲೀಟರ್ ನೀರನ್ನು ಕುಡಿಯುತ್ತವೆ. ನೀರಿನ ಅವಶ್ಯಕತೆಯು ಈ ಕೆಳಗೆ ತಿಳಿಸಿದ ಸಂಗತಿಗಳನ್ನು ಅವಲಂಬಿಸಿದೆ.
• ದೊಡ್ಡ ಜಾನುವಾರುಗಳಿಗೆ ನೀರಿನ ಬೇಡಿಕೆ ಪ್ರಮಾಣವು ಸಣ್ಣ ಜಾನುವಾರುಗಳಿಗಿಂತ ಹೆಚ್ಚಿಗೆ ಇರುತ್ತದೆ.
ಹಾಲು ಹಿಂಡುವ ಜಾನುವಾರುಗಳಿಗೆ ಹಾಲು ಹಿಂಡದ ಜಾನುವಾರುಗಳಿಗಿಂತ ಹೆಚ್ಚಿಗೆ ನೀರು ಬೇಕಾಗುತ್ತದೆ. (ಪ್ರತಿ ಲೀಟರ್ ಹಾಲಿಗೆ ೪ ಲೀಟರ್ ನೀರು ಕುಡಿಯಲು ಬೇಕಾಗುತ್ತದೆ).
ಬೇಸಿಗೆ ಕಾಲದಲ್ಲಿ ಉಳಿದ ಕಾಲಗಳಿಗಿಂತ ಎರಡರಷ್ಟು ಹೆಚ್ಚಿಗೆ ನೀರು ಬೇಕಾಗುತ್ತದೆ.
ಜಾನುವಾರುಗಳಿಗೆ ಒಣ ಮೇವು ತಿನ್ನಿಸುತ್ತಿರುವಾಗ ನೀರಿನ ಅವಶ್ಯಕತೆ ಎರಡರಷ್ಟು ಹೆಚ್ಚಿಗೆ ಇರುತ್ತದೆ.
ಎಮ್ಮೆಗಳಿಗೆ ಆಕಳುಗಳಿಂತ ಶೇ. ೫೦ ರಷ್ಟು ಹೆಚ್ಚಿಗೆ ನೀರು ಬೇಕಾಗುತ್ತದೆ.
೨. ಸಸಾರಜನಕ (ಪ್ರೋಟಿನ್):
ಪ್ರಾಣಿಗಳ ದೇಹದಲ್ಲಿನ ಪ್ರತಿಯೊಂದು ಜೀವಕೋಶವು ಪ್ರೋಟಿನ್ನಿಂದ ರಚನೆಯಾಗಿರುತ್ತದೆ. ಶರೀರದಲ್ಲಿನ ಮಾಂಸ ಖಂಡಗಳು, ಮೂಳೆ, ಗ್ರಂಥಿಗಳು ಮತ್ತು ಅಂಗಾಂಗಗಳು ಪ್ರೋಟಿನ್ನಿಂದ ಮಾಡಲ್ಪಟ್ಟಿವೆ. ಶರೀರದಲ್ಲಿ ನಡೆಯುತ್ತಿರುವ ಸಕಲಕ್ರಿಯೆಗಳಲ್ಲಿ ಪ್ರೋಟಿನ್ ವಸ್ತುಗಳು ಭಾಗವಹಿಸುತ್ತವೆ. ಆದ್ದರಿಂದ ಪ್ರೋಟಿನ್ ಬಹಳ ಜೀವನಾವಶ್ಯಕ ವಸ್ತುವಾಗಿದೆ.
ಕೊರತೆಯ ಲಕ್ಷಣಗಳು:
ಸಸಾರಜನಕದ ಕೊರತೆಯು, ಷಿಷ್ಟದ ಕೊರತೆಯ ಜೊತೆಗೆ ಕಂಡು ಬರುತ್ತದೆ. ಪ್ರೋಟಿನಿನ ಗುಣ ಹಾಗೂ ಕ್ರಿಯಾಶೀಲತೆಯು ಅದರಲ್ಲಿರುವ ಅಮೈನೋ ಆಮ್ಲಗಳ ಸಂಖ್ಯೆ, ಪ್ರಮಾಣ ಮತ್ತು ಗುಣಮಟ್ಟ ಇವುಗಳನ್ನು ಅವಲಂಬಿಸಿರುತ್ತದೆ. ಪ್ರೋಟಿನ್ ಅಥವಾ ಅಮೈನೋ ಆಮ್ಲಗಳ ಕೊರತೆಯು ಪ್ರಾರಂಭದಲ್ಲಿ ಪ್ರಾಣಿಗಳ ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಉತ್ಪನ್ನದ ಮಟ್ಟವನ್ನು ಕುಂಠಿತಗೊಳಿಸುತ್ತದೆ. ಕ್ರಮೇಣ ಇದು ಹೆಚ್ಚಾಗುತ್ತ ಹೋಗಬಹುದು. ಇದರ ಜೊತೆಯಲ್ಲಿ ಪ್ರಾಣಿಗಳ ದೇಹವು ದುರ್ಬಲಗೊಂಡು ಸಕಲ ಕಾಯಿಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಕ್ರಮೇಣ ದುರ್ಬಲತೆ, ಅಶಕ್ತಿ ಹಾಗೂ ಕಾಯಿಲೆಗಳು ಬಂದು ಕೊನೆಯಲ್ಲಿ ಸಾವು ಸಂಭವಿಸಬಹುದು.
ನಿವಾರಣೋಪಾಯ
ಪ್ರೋಟಿನ್ ಅಂಶ ಹೆಚ್ಚು ಇರುವಂತಹ ಎಣ್ಣೆ ಕಾಳುಗಳ ಹಿಂಡಿ, ತೌಡು ಇತ್ಯಾದಿಗಳನ್ನು ಎಲ್ಲ ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೊಡಬೇಕು. ಪ್ರೋಟಿನ್ ದಿನನಿತ್ಯ ಶರೀರ ಕ್ರಿಯೆಗಳಿಗೆ ಅವಶ್ಯಕವಾಗಿ ಬೇಕಾಗಿರುವದರಿಂದ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಸಮತೋಲ ಆಹಾರ ಕೊಡುವುದರಿಂದ ಕೊರತೆ ಕಂಡುಬರುವುದಿಲ್ಲ. ಬೆಳೆಯುವ ಪ್ರಾಣಿಗಳಿಗೆ ಪ್ರೋಟಿನಿನ ಅವಶ್ಯಕತೆ ಹೆಚ್ಚಿಗೆ ಇರುತ್ತದೆ.
೩. ಪಿಷ್ಟ /ಶರ್ಕರ (ಕಾರ್ಬೋಹೈಡ್ರೆಟ್ಸ್):
ಎಲ್ಲ ಸಸ್ಯಗಳು ಪಿಷ್ಟ ಪದಾರ್ಥಗಳಿಂದ ಮಾಡಲ್ಪಟ್ಟಿವೆ. ಸಸ್ಯಗಳು ಹಾಗೂ ಸಸ್ಯಗಳಿಂದ ತಯಾರಾದಂತಹ ಕಾಳು ಹಾಗೂ ಇತರೇ ಆಹಾರ ಪದಾರ್ಥಗಳು ಪ್ರಾಣಿಗಳಿಗೆ ಶಕ್ತಿಯನ್ನು ಪೂರೈಸುತ್ತವೆ. ಪ್ರಾಣಿಗಳಿಗೆ ಶಕ್ತಿಯು ಅತಿ ಅವಶ್ಯವಾಗಿ ಬೇಕಾಗಿರುವಂತಹ ವಸ್ತುವಾಗಿದೆ. ಶಕ್ತಿಯಿಂದ ಶರೀರದ ಶಾಖಪಾಲನೆಗೆ, ದಿನನಿತ್ಯದ ಚಟುವಟಿಕೆಗಳಿಗೆ, ಬೆಳವಣಿಗೆಗೆ ಸಂತಾನೋತ್ಪತ್ತಿಗೆ ಹಾಗೂ ಹಾಲು, ಮಾಂಸ ಇತ್ಯಾದಿಗಳ ಉತ್ಪನ್ನಕ್ಕೆ ಸಹಾಯವಾಗುತ್ತದೆ.
ಕೊರತೆಯ ಲಕ್ಷಣಗಳು
ಕೀಳು ದರ್ಜೆಯ ಮೇವನ್ನು ಅತೀ ತಿನ್ನಿಸುವುದರಿಂದ ಅಥವಾ ಕಡಿಮೆ ಮೇಯಿಸುವದರಿಂದ ಅಥವಾ ಶರ್ಕರ ಪದಾರ್ಥಗಳ ಕೊರತೆಯಾಗಿ ಶರೀರದಲ್ಲಿಅಶಕ್ತತೆ ಕಂಡುಬರುವುದು ಇಂತಹ ಸಂದರ್ಭದಲ್ಲಿ ಬೆಳೆಯುತ್ತಿರುವ ಪ್ರಾಣಿಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರಾಣಿಗಳ ಸಂತಾನೋತ್ಪತ್ತಿ, ಉತ್ಪಾದನಾ ಸಾಮರ್ಥ್ಯ ಹಾಗೂ ದೇಹದ ತೂಕ ಕಡಿಮೆ ಆಗುತ್ತದೆ. ಕೊರತೆ ಅತಿ ಹೆಚ್ಚಾದಾಗ ಶರೀರದಲ್ಲಿರುವ ಪ್ರೋಟಿನ್ ಪದಾರ್ಥಗಳನ್ನು ಶಕ್ತಿ ಪೂರೈಸಲು ಉಪಯೋಗಿಸಲ್ಪಡುವುದರಿಂದ ಶರೀರದಲ್ಲಿ ಪ್ರೋಟಿನ್ ಕೊರತೆ ಕಂಡು ಬಂದು ಕೊನೆಗೆ ಅತೀ ಅಪಾಯಕಾರಿ ಪರಿಣಾಮ ಉಂಟಾಗಬಹುದು. ಕರು ಹಾಕುವ ಮೊದಲು ಹಾಗೂ ನಂತರ ಮತ್ತು ಅತೀ ಚಳಿಯಲ್ಲಿ ಷಿಷ್ಯದ ಅವಶ್ಯಕತೆ ಹೆಚ್ಚಾಗಿರುತ್ತದೆ.
ನಿವಾರಣೋಪಾಯ
ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಶರ್ಕರ ಪದಾರ್ಥಗಳ ಕೊರತೆ ಹೆಚ್ಚಾಗಿ ಕಂಡು ಬರುವುದಿಲ್ಲ. ಕಾರಣ, ಸಸ್ಯ ಮೂಲದಿಂದ ಬರುವ ಎಲ್ಲ ಪದಾರ್ಥಗಳಲ್ಲಿ ಶರ್ಕರ ಅಂಶವಿದ್ದು, ಇವು ಮುಖ್ಯ ಪೂರೈಕೆಯ ಮೂಲಗಳಾಗಿವೆ. ಕಣಿಕೆ, ಹುಲ್ಲು, ಹೊಟ್ಟು ಇಂತಹವುಗಳಲ್ಲಿ ಸಾಮಾನ್ಯವಾಗಿ ಶರ್ಕರ ಅಂಶವು ಕಡಿಮೆ ಪ್ರಮಾಣದಲ್ಲಿರುತ್ತದೆ. ಗೋವಿನಜೋಳ, ಜೋಳ, ರಾಗಿ, ತೌಡುಗಳು ಹಾಗೂ ಇತರೇ ಕಾಳುಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪದಾರ್ಥಗಳನ್ನು ಹೊಂದಿರುತ್ತವೆ. ಸಕ್ಕರೆ ತಯಾರಿಕೆಯಲ್ಲಿ ಉತ್ಪನ್ನವಾಗುವಂತಹ ಕಾಕಂಬಿ, ಮಳೆಗಿಡ ಹಾಗೂ ಜಾಲಿಗಿಡಗಳ ಕಾಯಿಗಳಿಂದಲೂ ಪಡೆಯಬಹುದು. ಶರ್ಕರಪಿಷ್ಟ ಪದಾರ್ಥಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮೇಲೆ ತಿಳಿಸಿದ ಪದಾರ್ಥಗಳನ್ನು ಪ್ರಾಣಿಗಳಿಗೆ ಸೂಕ್ತ ಪ್ರಮಾಣದಲ್ಲಿ ಪ್ರತಿನಿತ್ಯ ತಿನ್ನಿಸಬೇಕು.
೪. ಕೊಬ್ಬು:
ಶರ್ಕರ ಪದಾರ್ಥಗಳಂತೆ ಕೊಬ್ಬು ಪ್ರಾಣಿಗಳಿಗೆ ಶಕ್ತಿ ಪೂರೈಸುವ ಪೋಷಕಾಂಶವಾಗಿದೆ. ಕೊಬ್ಬಿನ ಅಂಶವು ಪ್ರಾಣಿಗಳ ಮೂಲ ಹಾಗೂ ಸಸ್ಯಗಳ ಮೂಲದಿಂದ ಪೂರೈಕೆಯಾಗುತ್ತದೆ. ಮುಖ್ಯವಾಗಿ ಪ್ರಾಣಿಗಳ ಶರೀರದಲ್ಲಿ ಕೊಬ್ಬಿನ ಪದಾರ್ಥಗಳು ಶಕ್ತಿಯನ್ನು ಪೂರೈಸುತ್ತವೆ. ಕೊಬ್ಬಿನಲ್ಲಿ ಶರ್ಕರ ಪದಾರ್ಥಗಳಿಗಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚು ಶಕ್ತಿ ಅಂಶ ಹೊಂದಿರುತ್ತದೆ. ಕೊಬ್ಬಿನ ಪದಾರ್ಥಗಳು ಶರೀರಕ್ಕೆ ಶಕ್ತಿ ಪೂರೈಸುವುದಲ್ಲದೇ, ಅವಶ್ಯಕವಾದ ಕೊಬ್ಬಿನ ಆಮ್ಲ ಮತ್ತು ಎಣ್ಣೆಗಳಲ್ಲಿ ಕರಗುವಂತಹ ಕೆಲ ಜೀವಸತ್ವಗಳನ್ನು ಪೂರೈಸುವಲ್ಲಿ ಸಹಾಯಕವಾಗುತ್ತವೆ.
ಕೊರತೆಯ ಲಕ್ಷಣಗಳು
ಕೊಬ್ಬಿನ ಕೊರತೆಯಾದಲ್ಲಿ ಶರ್ಕರ ಪದಾರ್ಥಗಳ ಕೊರೆತೆಯಿಂದ ಕಂಡು ಬರುವಂತಹ ಎಲ್ಲ ಲಕ್ಷಣಗಳು ಕಂಡು ಬರುತ್ತವೆ. ಕೊಬ್ಬಿನ ಆಮ್ಲಗಳ ಕೊರತೆಯಿಂದಾಗಿಚರ್ಮರೋಗ, ಕುಂಠಿತ ಬೆಳವಣಿಗೆ, ಸಂತಾನೋತ್ಪತ್ತಿ ಹಾಗೂ ಕಡಿಮೆ ಉತ್ಪಾದನೆ ತೊಂದರೆಗಳು ಇತ್ಯಾದಿ ಕಂಡು ಬರುತ್ತವೆ.
ನಿವಾರಣೋಪಾಯ
ಪ್ರಾಣಿಗಳ ಆಹಾರದಲ್ಲಿ ಪ್ರತಿಶತ ಕನಿಷ್ಠ ೩-೫ ಭಾಗದಷ್ಟು ಕೊಬ್ಬಿನ ಅಂಶ ಇರಲೇಬೇಕು. ಕೊಬ್ಬಿನ ಅಂಶವು ಪ್ರಾಣಿಗಳಿಗೆ ಮುಖ್ಯವಾಗಿ ಎಣ್ಣೆ ಕಾಳುಗಳ ಹಿಂಡಿ, ತೌಡು, ಕಾಳುಗಳಿಂದ ದೊರೆಯುತ್ತದೆ.
೫. ಖನಿಜಾಂಶಗಳು:
ಖನಿಜಾಂಶಗಳು ಅಂದರೆ ಸುಣ್ಣ, ರಂಜಕ, ಕಬ್ಬಿಣ, ತಾಮ್ರ, ಸತುವು, ಉಪ್ಪು ಹಾಗೂ ಇತರೇ ಖನಿಜಗಳು ಪ್ರತಿಯೊಂದು ಪ್ರಾಣಿಗಳ ಶರೀರಕ್ಕೆ ಅತೀ ಅವಶ್ಯವಾಗಿ ದಿನನಿತ್ಯ ಬೇಕಾಗಿರುತ್ತವೆ. ಇವು ಶರೀರದಲ್ಲಿ ಆಹಾರ ಪಚನವಾಗಲು ಹಾಗೂ ಪಚನ ಆದ ಆಹಾರವು ಶರೀರದಲ್ಲಿ ಹೀರಲ್ಪಟ್ಟು ಶರೀರದ ಅನೇಕ ಕ್ರಿಯೆಗಳಲ್ಲಿ ಭಾಗವಹಿಸಲು ಅತೀ ಅವಶ್ಯಕವಾಗಿ ಬೇಕಾಗಿರುತ್ತದೆ. ಅಲ್ಲದೆ ದೇಹದ ಬೆಳವಣಿಗೆ, ಹಾಲು, ತತ್ತಿ, ಉಣ್ಣೆ, ಮಾಂಸ ಇತ್ಯಾದಿಗಳ ಉತ್ಪಾದನೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಇವುಗಳ ಕೊರತೆ ಆದಲ್ಲಿ ಪಾಣಿಗಳ ಬೆಳವಣಿಗೆ, ಉತ್ಪಾದನೆ, ಸಂತಾನೋತ್ಪತ್ತಿ ಹಾಗೂ ಗರ್ಭ ಧರಿಸುವುದು ಮತ್ತು ಕರು ಹಾಕುವ ಕ್ರಿಯೆಗಳೆಲ್ಲಾ ಕುಂಠಿತಗೊಳ್ಳುತ್ತವೆ.
ಪ್ರಾಣಿಗಳ ಶರೀರಕ್ಕೆ ಕೆಲವೊಂದು ಖನಿಜಾಂಶಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಇಂತಹವುಗಳನ್ನು “ಮೇಜರ್ ಎಲಿಮೆಂಟ್ಸ್” ಎಂದು ಕರೆಯುತ್ತಾರೆ. ಉದಾಹರಣೆಗೆ ಕ್ಯಾಲ್ಸಿಯಂ (ಸುಣ್ಣ), ಫಾಸ್ಪರಸ್ (ರಂಜಕ), ಸೋಡಿಯಂ, ಪೋಟ್ಯಾಶಿಯಂ, ಮ್ಯಾಗ್ನೆಸಿಯಂ, ಗಂಧಕ ಮತ್ತು ಕ್ಲೋರೈಡ್ಗಳು. ಇನ್ನು ಇತರೇ ಕೆಲ ಖನಿಜಗಳು ಕಡಿಮೆ ಹಾಗೂ ಅತೀ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತವೆ. ಇಂತಹವುಗಳನ್ನು “ಮೈನರ್ ಟ್ರೇಸ ಎಲಿಮೆಂಟ್ಸ್” ಎಂದೂ ಕರೆಯುತ್ತಾರೆ. ಉದಾಹರಣೆಗೆ ಮ್ಯಾಂಗನೀಸ್, ಜಿಂಕ್ (ಸತು), ಕಬ್ಬಿಣ, ತಾಮ್ರ, ಸೆಲೀನಿಯಂ, ಅಯೋಡಿನ್, ಕೋಬಾಲ್ಟ್ ಹಾಗೂ ಫ್ಲೋರಿನ್.
ಲವಣ ಮಿಶ್ರಣದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಬದಲು ಕ್ಯಾಲ್ಸಿಯಂ ಲ್ಯಾಕ್ಟೇಟನ್ನು ಸೇರಿಸಿ ಮಿಶ್ರತಳಿ ಆಕಳು ಹಾಗೂ ಎಮ್ಮೆಗಳಿಗೆ ಪುರೈಸಿದಾಗ, ಅವುಗಳ ಬೆಳವಣಿಗೆ, ಸಂತಾನೋತ್ಪತ್ತಿ ಹಾಗೂ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು ಕಂಡು ಬಂದಿದ್ದರಿಂದ ಪಶುಗಳ ಲವಣ ಮಿಶ್ರಣದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಬದಲು ಅದೇ ಪ್ರಮಾಣದ ಕ್ಯಾಲ್ಸಿಯಂ ಲ್ಯಾಕ್ಟೇಟ್ ಸೇರಿಸಲು ಶಿಫಾರಸ್ಸು ಮಾಡಲಾಗಿದೆ.ಕೊರತೆಯ ಲಕ್ಷಣಗಳು
ಕ್ಯಾಲ್ಸಿಯಂ ಫಾಸ್ಪರಸ್ ಮತ್ತು ಮ್ಯಾಗ್ನೆಸಿಯಂ ಇವುಗಳು ಶರೀರದಲ್ಲಿ ಮುಖ್ಯವಾಗಿ ಮೂಳೆಗಳ ಬೆಳವಣಿಗೆ, ಮೂಳೆಗಳ ಆರೋಗ್ಯ, ಮಾಂಸ ಖಂಡಗಳ ಕೆಲಸ ನಿರ್ವಹಣೆ ಹಾಗೂ ಇನ್ನೂ ಅನೇಕ ಶರೀರ ಕ್ರಿಯೆಗಳು ನಡೆಯಲು ಉಪಯುಕ್ತವಾಗಿವೆ. ಇವುಗಳ ಕೊರತೆ ಉಂಟಾದಲ್ಲಿ ಮೂಳೆಗಳು ದುರ್ಬಲ ಹಾಗೂ ವಕ್ರವಾಗುತ್ತವೆ. ಪ್ರಾಣಿಗಳಲ್ಲಿ ಉತ್ಪನ್ನಮಟ್ಟ ಕಡಿಮೆ ಆಗುತ್ತದೆ.
ಸೋಡಿಯಂ, ಪೋಟ್ಯಾಶಿಯಂ, ಗಂಧಕ ಮತ್ತು ಕ್ಲೋರೈಡುಗಳು ಶರೀರ ಕ್ರಿಯೆಗಳಲ್ಲಿ, ಮಾಂಸ ಖಂಡಗಳ ರಚನೆ ಮತ್ತು ಕೆಲಸ ನಿರ್ವಹಣೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತವೆ. ಪಚನವಾದ ಆಹಾರ ಪೂರ್ಣವಾಗಿ ಉಪಯೋಗಗೊಳ್ಳಲು ಇವು ಸಹಕಾರಿಯಾಗುತ್ತವೆ. ಇವುಗಳ ಕೊರತೆ ಆದಲ್ಲಿ ನರಗಳ ಹಾಗೂ ಮಾಂಸ ಖಂಡಗಳ ದುರ್ಬಲತೆ ಆಗಿ ಪ್ರಾಣಿಗಳು ಕ್ರಮೇಣ ಸೊರಗುತ್ತವೆ. ಅವುಗಳ ಉತ್ಪನ್ನ ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಾವು ಸಂಭವಿಸಬಹುದು.
ಟ್ರೇಸ್ ಎಲಿಮೆಂಟ್ಸ್ ಗಳಾದ ಮ್ಯಾಂಗನೀಜ, ಸತು, ಕಬ್ಬಿಣ, ತಾಮ್ರ, ಅಯೋಡಿನ್ ಕೋಬಾಲ್ಟ್, ಸೆಲಿನಿಯಂ ಹಾಗೂ ಪ್ಲೋರಿನ್ ಮುಂತಾದವುಗಳೆಲ್ಲವೂ ಶರೀರದಲ್ಲಿ ನಡೆಯುವ ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ಅತೀ ಅವಶ್ಯಕವಾಗಿ ಬೇಕಾದಂತಹವು. ಈ ಖನಿಜಗಳು ಮೂಳೆಗಳ ಬೆಳವಣಿಗೆ, ರಕ್ತದ ಉತ್ಪತ್ತಿ, ಗರ್ಭಕಟ್ಟುವುದು, ಹಾಲು ಹಾಗೂ ಇತರ ಉತ್ಪನ್ನಗಳಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ಪ್ರಾಣಿಗಳಲ್ಲಿ ಅನೇಕ ತರಹದ ಕಾಯಿಲೆಗಳು ಕಂಡು ಬರುತ್ತವೆ. ಪ್ರಾಣಿಗಳು ದುರ್ಬಲಗೊಂಡು ಅವುಗಳ ಉತ್ಪನ್ನಮಟ್ಟ ಕುಂಠಿತವಾಗುತ್ತದೆ ಹಾಗೂ ಕೆಲವೊಮ್ಮೆ ಸಾವು ಸಂಭವಿಸಬಹುದು.
ನಿವಾರಣೋಪಾಯ
ಸಮತೋಲನ ಆಹಾರ ಬಳಕೆ, ಪ್ರತಿನಿತ್ಯ ಆಹಾರದ ಜೊತೆ ಖನಿಜ ಮಿಶ್ರಣ (೧೦-೩೦ ಗ್ರಾಂ)ವನ್ನು ತಪ್ಪದೇ ಕೊಡುವುದು ಹಾಗೂ ಅವಶ್ಯಕತೆ ಕಂಡು ಬಂದಲ್ಲಿ ಪಶುವೈದ್ಯರ ಸಲಹೆಯ ಮೇರೆಗೆ ಇಂಜೆಕ್ಷನ್ ಮೂಲಕ ಕೊರತೆಯನ್ನು ಕಡಿಮೆ ಮಾಡಬಹುದು.
೬. ಜೀವಸತ್ವಗಳು (ಅನ್ನಾಂಗಗಳು)
ಜೀವಸತ್ವಗಳು ಬಹು ಮುಖ್ಯವಾದ ಆಹಾರದ ಘಟಕಾಂಶಗಳು, ಪ್ರತಿಯೊಂದು
ಪ್ರಾಣಿಯ ಶರೀರದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ಅತೀ ಅವಶ್ಯಕವಾಗಿ ಬೇಕಾದಂತಹ ಪೋಷಕಾಂಶಗಳು. ಇವುಗಳನ್ನು ಮುಖ್ಯವಾಗಿ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಮೊದಲನೆಯದಾಗಿ ಎಣ್ಣೆಯಲ್ಲಿ ಕರಗುವಂತಹ ಜೀವಸತ್ವಗಳು; ಅಂದರೆಅನ್ನಾಂಗ ಎ, ಡಿ, ಇ. ಕೆ. ಹಾಗೂ ಎರಡನೆಯದಾಗಿ ನೀರಿನಲ್ಲಿ ಕರಗುವಂತಹ ಜೀವಸತ್ವಗಳು, ಅಂದರೆ ಅನ್ನಾಂಗ ಸಿ ಮತ್ತು ಅನ್ನಾಂಗ ಬಿ ಗುಂಪಿನವು.
ಕೊರತೆಯ ಲಕ್ಷಣಗಳು
ಅ. ಕೊಬ್ಬಿನಲ್ಲಿ ಕರಗುವಂತಹ ಅನ್ನಾಂಗಗಳು
‘ಎ’ ಅನ್ನಾಂಗವು ಪ್ರಾಣಿಗಳ ದೃಷ್ಟಿಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಇದಲ್ಲದೇ, ಶರೀರದಲ್ಲಿನ ಪ್ರತಿ ಅಂಗದ ಜೀವಕೋಶಗಳ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡುತ್ತದೆ. ಇದರ ಕೊರತೆ ಉಂಟಾದಲ್ಲಿ ದೃಷ್ಟಿದೋಷ, ಕುರುಡುತನ, ಚರ್ಮರೋಗ, ಬಂಜೆತನ ಹಾಗೂ ಅನೇಕ ವಿಧವಾದ ಕಾಯಿಲೆಗಳು ಬರಲು ಆಸ್ಪದವಾಗುತ್ತದೆ.
‘ಡಿ’ ಅನ್ನಾಂಗವು ಬಹಳ ಮುಖ್ಯವಾಗಿ ಮೂಳೆಗಳ ಬೆಳವಣಿಗೆ ಹಾಗೂ ಆರೋಗ್ಯ ರಕ್ಷಣೆಗೆ ಸಹಾಯಕಾರಿಯಾಗಿರುತ್ತದೆ. ಇದರ ಕೊರತೆಯಾದಲ್ಲಿ ಮೂಳೆಗಳು ದುರ್ಬಲ ಹಾಗೂ ವಕ್ರವಾಗುತ್ತವೆ. ಅನೇಕ ಸಲ ಮೂಳೆಗಳು ಮುರಿಯಲೂಬಹುದು.
‘ಇ’ ಅನ್ನಾಂಗವು ಶರೀರ ಕ್ರಿಯೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತದೆ. ಇದರ ಕೊರತೆಯುಂಟಾದಲ್ಲಿ ಮಾಂಸ ಖಂಡಗಳ ದುರ್ಬಲತೆ, ಬಂಜೆತನ, ಚರ್ಮರೋಗ ಹಾಗೂ ಇತರ ಕಾಯಿಲೆಗಳು ಕಂಡು ಬರುತ್ತವೆ.
‘ಕೆ’ ಅನ್ನಾಂಗವು ಶರೀರದಲ್ಲಿ ಬಹು ಮುಖ್ಯವಾಗಿ ರಕ್ತ ಹೆಪ್ಪುಗಟ್ಟಲು ಬೇಕಾಗುತ್ತದೆ. ಇದರ ಕೊರತೆಯಾದಲ್ಲಿ ಗಾಯಗಳಿಂದ ರಕ್ತ ನಿರಂತರವಾಗಿ ಸೋರುತ್ತದೆ.
ಆ. ನೀರಿನಲ್ಲಿ ಕರಗುವಂತಹ ಅನ್ನಾಂಗಗಳು
‘ಸಿ’ ಅನ್ನಾಂಗ ಶರೀರದಲ್ಲಿರುವ ಅಂಗಗಳ ಜೀವಕೋಶಗಳ ಆರೋಗ್ಯ ರಕ್ಷಣೆಯಲ್ಲಿ ನೆರವಾಗುತ್ತದೆ. ಇದರ ಕೊರತೆಯಾದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಕಾಯಿಲೆಗಳು ಕಂಡು ಬರುತ್ತವೆ.
‘ಬಿ’ ಅನ್ನಾಂಗ ಸಮೂಹದಲ್ಲಿ ಬಿ-೧ (ಥೈಮಿನ್), ಬಿ-೨ (ರೈಬೋಪ್ಲೆವಿನ್), ನಿಯಾಸಿನ್, ಬಿ-೬ (ಪೈರಿಡಾಕ್ಸಿನ್), ಪ್ಯಾಂಟೊಥೆನಿಕ್ ಆಮ್ಲ, ಬಯೋಟಿನ್, ಪೋಲಿಕ್ ಆಮ್ಲ, ಬಿ-೧೨ (ಸೈನೋಕೊಬಲಮೈನ) ಹಾಗೂ ಕೋಲಿನ್ ಎಂಬ ಒಂಬತ್ತು ಅನ್ನಾಂಗಗಳಿವೆ. ಅವುಗಳೆಲ್ಲವೂ ಶರೀರದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೂ ಅತೀ ಅವಶ್ಯಕವಾಗಿ ಬೇಕಾಗಿರುತ್ತವೆ. ಇವುಗಳ ಕೊರತೆ ಉಂಟಾದಲ್ಲಿ ಶರೀರ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿ ನಾನಾ ರೀತಿಯ ಕಾಯಿಲೆಗಳು ಕಂಡು ಬರುತ್ತವೆ. ನರಗಳು ಹಾಗೂ ಮಾಂಸಖಂಡಗಳು ದುರ್ಬಲಗೊಳ್ಳತ್ತವೆ. ಪ್ರಾಣಿಗಳ ಬೆಳವಣಿಗೆ, ಸಂತಾನೋತ್ಪತ್ತಿ ಹಾಗೂ ಉತ್ಪನ್ನಮಟ್ಟ ಕಡಿಮೆಗೊಳ್ಳುತ್ತವೆ.ನಿವಾರಣೋಪಾಯ
ಶರೀರಕ್ಕೆ ಬೇಕಾದ ಅನ್ನಾಂಗಗಳು ಆಹಾರ ಪದಾರ್ಥದಲ್ಲಿ ಇದ್ದೇ ಇರುತ್ತವೆ. ಆದರೆ ಎಲ್ಲ ಅನ್ನಾಂಗಗಳೂ ಶರೀರಕ್ಕೆ ಬೇಕಾದ ಪ್ರಮಾಣದಲ್ಲಿ ಯಾವುದೇ ಒಂದು ಆಹಾರದಲ್ಲಿ ಸಿಗುವುದಿಲ್ಲ. ಆದ್ದರಿಂದ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಮಿಶ್ರ ಮಾಡಿ ತಿನ್ನಿಸುವುದರಿಂದ ಒಂದರಲ್ಲಿಯ ಕೊರತೆಯ ಅಂಶವನ್ನು ಇನ್ನೊಂದರಿಂದ ಪಡೆಯಬಹುದು. ಆಹಾರದಲ್ಲಿ ಕೊರತೆ ಉಂಟಾದಾಗ ಪಶು ವೈದ್ಯರ ಸಲಹೆಯಂತೆ ಔಷಧಿ ಇಲ್ಲವೆ ಇಂಜೆಕ್ಷನ್ ಮೂಲಕ ಇವುಗಳ ಕೊರತೆಯನ್ನು ಕಡಿಮೆ ಮಾಡಬಹುದು.
II. ಸಮತೋಲನ ಪಶು ಆಹಾರ
ಸಮತೋಲನ ಪಶು ಆಹಾರವು ಅಧಿಕ ಉತ್ಪಾದನೆಗೆ ಬಹಳ ಮಹತ್ವದ್ದಾಗಿದೆ. ಮನುಷ್ಯರ ಆಹಾರದಂತೆ ಪಶು ಆಹಾರವೂ ಸಮತೋಲವಾಗಿರಬೇಕು. ಅಂದರೆ ಎಲ್ಲ ಪೋಷಕ ಸತ್ವಗಳಾದ, ಶಕ್ತಿದಾಯಕ ಘಟಕಗಳು, ಸಸಾರಜನಕ, ಖನಿಜಾಂಶಗಳು ವಿವಿಧ ಅನ್ನಾಂಗಗಳು ಮತ್ತು ಇತರ ಸೂಕ್ಷ್ಮ ಪೋಷಕ ಸತ್ವಗಳು ಸರಿಯಾದ ಪ್ರಮಾಣ ಮತ್ತು ಅನುಪಾತಗಳಲ್ಲಿ ಒಂದು ದಿನಕ್ಕೆ ಬೇಕಾಗುವಷ್ಟು ಇರಬೇಕಾಗುವುದು.
ಪಶು ಆಹಾರ ಪದಾರ್ಥಗಳು
ಪಶು ಆಹಾರ ಪದಾರ್ಥಗಳನ್ನು ಮೂರು ವಿಧವಾಗಿ ವಿಂಗಡಿಸಲಾಗುವುದು. ೧. ಹಸಿರು ಮೇವುಗಳು, ೨. ಒಣ ಹಸಿರು ಮೇವುಗಳು ಮತ್ತು ೩. ದಾಣಿ ಮಿಶ್ರಣಗಳು
೧. ಹಸಿರು ಮೇವುಗಳು
ಹಸಿರು ಮೇವುಗಳನ್ನು ಅನುಕೂಲಕ್ಕನುಗುಣವಾಗಿ ಬೆಳೆದು ಶೇ. ೫೦ ರಷ್ಟು ಹೂವಾಡುವ ಅಥವಾ ಹಾಲುಗಾಳು ಸಮಯದಲ್ಲಿ ಕಟಾವು ಮಾಡಿ ಪಶುಗಳಿಗೆ ಹಾಕಬಹುದು.
೧. ದ್ವಿದಳ ಮೇವಿನ ಬೆಳೆಗಳು. ಉದಾ: ಕುದುರೆಮೆಂತೆ, ಅಲಸಂದಿ, ಅವರೆ, ಹುರಳಿ, ಸ್ಟೈಲೋ ಇತ್ಯಾದಿ.
೨. ಏಕದಳ ಮೇವಿನ ಬೆಳೆಗಳು. ಉದಾ: ಗೋವಿನ ಜೋಳ, ಜೋಳ, ಸಜ್ಜೆ ಇತ್ಯಾದಿ.
೩. ಹುಲ್ಲುಗಳು ಉದಾ: ನೇಪಿಯರ್ ಹುಲ್ಲು, ಪ್ಯಾರಾ ಹುಲ್ಲು, ಗಿನಿ ಹುಲ್ಲು ಇತ್ಯಾದಿ ಅಲ್ಲದೇ ಏಕದಳ ಮೇವು ಹಾಗೂ ಹುಲ್ಲುಗಳನ್ನು ರಸ ಮೇವುಗಳನ್ನಾಗಿ ಕೂಡ ಬಳಸಬಹುದು. ಏಕದಳ ಮೇವನ್ನು ೨/೩ ಪ್ರಮಾಣ ಹಾಗೂ ದ್ವಿದಳ ಮೇವನ್ನು ೧/೩ ಪ್ರಮಾಣದಲ್ಲಿ ಬೆಳೆದರೆ ಉತ್ತಮ ಸಮತೋಲನ ಮೇವಾಗುವುದು.೨. ಒಣ ಹಸಿರು ಮೇವುಗಳು
ಮೇಲೆ ತಿಳಿಸಿದ ಹಸಿರು ಮೇವುಗಳನ್ನೇ ಒಣಗಿಸಿ ಒಣ ಹಸಿರು ಮೇವನ್ನಾಗಿ ಬಳಸಬಹುದು.
೩. ದಾಣಿ ಮಿಶ್ರಣಗಳು
ದಾಣಿ ಮಿಶ್ರಣಗಳನ್ನು ಎರಡು ಮುಖ್ಯ ಪದಾರ್ಥಗಳನ್ನಾಧರಿಸಿ ಮಾಡಲಾಗುತ್ತದೆ.
೧. ದವಸ ಧಾನ್ಯಗಳು ಮತ್ತು ಅವುಗಳ ಉಪ ಪದಾರ್ಥಗಳು.
೨. ವಿವಿಧ ಹಿಂಡಿಗಳು (ಎಣ್ಣೆ ಕಾಳುಗಳ ಉಪಪದಾರ್ಥಗಳು).
ದವಸ ಧಾನ್ಯಗಳಲ್ಲಿ ಗೋದಿ, ಜೋಳ, ಗೋವಿನ ಜೋಳ, ಬಾರಿ, ಸಜ್ಜೆ, ತೋಕೆ ಗೋದಿ ಬರುವವು. ಇವುಗಳ ಉಪಪದಾರ್ಥಗಳಾದ ಗೋದಿ ತವಡು, ಅಕ್ಕಿ ತವಡು ಹಾಗೂ ಬೇಳೆಕಾಳುಗಳ ತವಡು ಇತ್ಯಾದಿ ಕೂಡ ಬಳಸಬಹುದು. ಅದೇ ರೀತಿ ಹಿಂಡಿಗಳಲ್ಲಿ ಶೇಂಗಾ ಹಿಂಡಿ, ಕುಸುಬೆ ಹಿಂಡಿ, ಸೂರ್ಯಕಾಂತಿ ಹಿಂಡಿ, ಸೋಯಾಅವರೆ ಹಿಂಡಿ, ಹತ್ತಿಕಾಳಿನ ಹಿಂಡಿ ಇತ್ಯಾದಿ. ಶಕ್ತಿ ಹಾಗೂ ಸಸಾರಜನಕದ ಪ್ರಮಾಣಕ್ಕೆ ಅನುಗುಣವಾಗಿ ೨/೩ ರಷ್ಟು ದವಸ ಧಾನ್ಯಗಳು ಹಾಗೂ ಅವುಗಳ ಉಪಪದಾರ್ಥಗಳು ಮತ್ತು ೧/೩ ರಷ್ಟು ಹಿಂಡಿಗಳನ್ನು ಮಿಶ್ರಣ ಮಾಡಿಕೊಳ್ಳಬೇಕು. ಸಮತೋಲನ ಆಹಾರಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ದವಸ ಧಾನ್ಯಗಳ ಹಾಗೂ ಅವುಗಳ ಉಪ ಪದಾರ್ಥಗಳ ಹಿಂಡಿಗಳು ಮತ್ತು ಖನಿಜಾಂಶಗಳನ್ನು ಬಳಸಬೇಕು. ಅಲ್ಲದೇ, ದಾಣಿ ಮಿಶ್ರಣದಲ್ಲಿ ಘಟಕಗಳ ಪೋಷಕಾಂಶಗಳನ್ನು ಪರೀಕ್ಷಿಸಿ, ಕೊರತೆ ಇರುವ, ಅನ್ನಾಂಗಗಳನ್ನು ಮತ್ತು ಉಳಿದ ಸೂಕ್ಷ್ಮಪೋಷಕಾಂಶಗಳನ್ನು ದಾಣಿ ಮಿಶ್ರಣದಲ್ಲಿ ಬೆರೆಸಬೇಕು.
ಪಶುಗಳಿಗೆ ತಿನ್ನಿಸುವ ಭತ್ತ ಮತ್ತು ಗೋದಿಯ ಹುಲ್ಲುಗಳು, ಜೋಳ, ಸಜ್ಜೆ ಹಾಗೂ ಗೋವಿನ ಜೋಳದ ದಂಟುಗಳು ಇತ್ಯಾದಿ ಕನಿಷ್ಠ ತರಗತಿಯ ಉಪಪದಾರ್ಥಗಳನ್ನು ಮೇವುಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ರೈತರಿಗೆ ಇವುಗಳನ್ನು ತಿನ್ನಿಸದೇ ಬೇರೆ ಉಪಾಯವೇ ಇರುವುದಿಲ್ಲ. ಕೇವಲ ಇಂತಹ ಉಪಪದಾರ್ಥಗಳನ್ನು ತಿನ್ನಿಸಿ ಪಶುಗಳಿಗೆ ಸಮತೋಲನ ಆಹಾರ ಪೂರೈಸಲು ಸಾಧ್ಯವಿಲ್ಲ.
ಮೇವುಗಳಿಂದ ಸಮತೋಲನ ಆಹಾರ:
ಉತ್ತಮ ದರ್ಜೆಯ ಹಸಿರು ಮೇವನ್ನು ಪಶು ತಿನ್ನುವಷ್ಟು ಪೂರೈಸಿದರೆ, ಸಮತೋಲನ ಆಹಾರವನ್ನು ಪೂರೈಸಿದಂತಾಗುವುದು. ಅದೇ ರೀತಿ ಉತ್ತಮ ದರ್ಜೆಯ ಹಸಿರು ಮೇವನ್ನು ಒಣಗಿಸಿ, ಒಣ ರೂಪದಲ್ಲಿ ಕೆಡದಂತೆ ಬೇಕಾಗವಷ್ಟು ಪೂರೈಸಿದರೆಒಂದು ದಿನಕ್ಕೆ ಪಶುವಿಗೆ ಬೇಕಾಗುವ ಬಹುತೇಕ ಎಲ್ಲ ಪೋಷಕಾಂಶಗಳು ಸಿಗುವವು. ತಜ್ಞರ ಸಲಹೆ ಪಡೆದು ಕೊರತೆ ಇರುವ ಪೋಷಕಾಂಶಗಳನ್ನು ದಾಣಿ ಮಿಶ್ರಣಗಳ ಮೂಲಕ ಪೂರೈಸಬಹುದು. ತೇವಾಂಶವನ್ನು ಅವಲಂಬಿಸಿ ಒಂದು ಸಾಮಾನ್ಯ ದೇಹದ ತೂಕದ ಆಕಳು (೩೫೦-೪೫೦ ಕಿ. ಗ್ರಾಂ) ಒಂದು ದಿನದಲ್ಲಿ ೪೦-೫೦ ಕಿ. ಗ್ರಾಂ ಹಸಿರು ಮೇವನ್ನು ತಿನ್ನುವುದು. ಇದೇ ರೀತಿ ಉತ್ತಮ ದರ್ಜೆಯ ಒಣ ಮೇವನ್ನು ೧೦-೧೨ ಕಿ. ಗ್ರಾಂ ಪ್ರಮಾಣದಲ್ಲಿ ತಿನ್ನುವುದು. ತಾಂತ್ರಿಕವಾಗಿ ನೋಡಿದಲ್ಲಿ ಕೇವಲ ಉತ್ತಮ ದರ್ಜೆಯ ಹಸಿರು ಮೇವನ್ನು ಅಥವಾ ಒಣ ಹಸಿರು ಮೇವನ್ನು ಪಶು ತಿನ್ನುವಷ್ಟು ಪೂರೈಸಿದಲ್ಲಿ ೫-೬ ಕಿ. ಗ್ರಾಂ ಹಾಲನ್ನು ದಾಣಿ ಮಿಶ್ರಣವಿಲ್ಲದೇ ಪಡೆಯಬಹುದು.
ಕನಿಷ್ಟ ಗುಣಮಟ್ಟದ ಮೇವು ಇದ್ದಾಗ ಸಮತೋಲನ ಆಹಾರ ಪಡೆಯುವ ರೀತಿ:
ವರ್ಷದ ಹನ್ನೆರಡೂ ತಿಂಗಳು ಪ್ರತಿದಿನ ಉತ್ತಮ ದರ್ಜೆಯ ಹಸಿರು ಮೇವನ್ನು ಪಡೆಯುವುದು ಅತಿ ದುರ್ಲಭ. ಕನಿಷ್ಟ ತರಗತಿಯ ಹಸಿರು ಮೇವು ಒಣ ಮೇವು ಅಥವಾ ಉಪ ಪದಾರ್ಥಗಳಾದ ಭತ್ತದ ಹುಲ್ಲು ಗೋದಿಯ ಹೊಟ್ಟು ಇತ್ಯಾದಿ ಮಾತ್ರ ತಿನ್ನಿಸಲು ಇದ್ದಾಗ ಉತ್ತಮ ಗುಣಮಟ್ಟದ ಅಂದರೆ ಸಸಾರಜನಕ ಶೇ. ೧೫-೨೦ ರಷ್ಟು ಇರುವ ದಾಣಿ ಮಿಶ್ರಣವನ್ನು ಪೂರೈಸಬೇಕು. ಮೇವಿನ ಗುಣಮಟ್ಟ ಮತ್ತು ಪ್ರಮಾಣವನ್ನು ನೋಡಿಕೊಂಡು ದಾಣಿ ಮಿಶ್ರಣ ಕೊಡಬೇಕು. ಸೂಕ್ಷ್ಮಪೋಷಕಾಂಶಗಳನ್ನು ಲಕ್ಷದಲ್ಲಿ ಇಟ್ಟು ದಾಣಿ ಮಿಶ್ರಣದ ಕೊರತೆ ನೋಡಿ ಹೆಚ್ಚುವರಿ ಪೋಷಕಾಂಶಗಳನ್ನು ಪೂರೈಸಬೇಕು. ಜಾನುವಾರುಗಳಿಗೆ ಕೇವಲ ಭತ್ತದ ಹುಲ್ಲು ಅಥವಾ ಗೋದಿ ಹೊಟ್ಟು ತಿನಿಸುವಾಗ ಕನಿಷ್ಟ ೨-೩ ಕಿ.ಗ್ರಾಂ ಹಸಿರು ಮೇವನ್ನು ಕೊಟ್ಟರೆ ಒಳ್ಳೆಯದು. ಇದರಿಂದ ‘ಎ’ ಅನ್ನಾಂಗ ದೊರೆಯುತ್ತದೆ.
ಮೇವಿನ ಸಮರ್ಥ ಬಳಕೆ:
ರೈತರು ತಾವು ಬೆಳೆದ ಆಹಾರದ ಬೆಳೆಗಳನ್ನು ಒಕ್ಕಲು ಮಾಡಿದ ನಂತರ ಉಳಿದ ಹುಲ್ಲು, ಸೊಪ್ಪೆ, ಹೊಟ್ಟು ಮುಂತಾದ ತ್ಯಾಜ್ಯ ವಸ್ತುಗಳನ್ನು ತಮ್ಮ ಪಶುಗಳಿಗೆ ಮೇವಾಗಿ ಬಳಸುವುದು ಬಹುಸಾಮಾನ್ಯ ಪದ್ಧತಿಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಳೆಯ ಆಯ್ಕೆ ಮತ್ತು ಬೆಳೆಯುವ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಹೆಚ್ಚಿನ ಮೇವಿನ ದೊರೆಯುವಿಕೆಯಲ್ಲಿ ಏರುಪೇರು ಉಂಟಾಗಿದೆ. ಹೆಚ್ಚಿನ ಇಳುವರಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಈ ಬೆಳೆಗಳಿಂದ ದೊರೆಯುತ್ತಿದ್ದ ಮೇವಿಗೆ ಹೆಚ್ಚಿನ ಗಮನ ಇಲ್ಲದಂತಾಗಿದೆ. ಒಂದು ಅಂಕಿ-ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ, ಇತರೆ ಬೆಳೆಗಳಿಂದ ಬರುತ್ತಿದ್ದ ಮೇವಿನ ಪ್ರಮಾಣ ಕಡಿಮೆಯಾಗಿ, ಸರಿಸುಮಾರು ಶೇ. ೨೨ ಕೊರತೆ ಕಂಡು ಬಂದಿದೆ. ಕೇವಲ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅವಶ್ಯಕತೆಗೆ ಅನುಗುಣವಾಗಿ ಮೇವಿನ ದೊರೆಯುವಿಕೆಉಪಲಬ್ಧವಾಗಿದೆ. ಇದರ ಜೊತೆ-ಜೊತೆ ಹೆಚ್ಚು ಹಾಲಿನ ಇಳುವರಿ ಕೊಡುವ ಆಕಳು ಮತ್ತು ಎಮ್ಮೆ ತಳಿಗಳ ಬಗ್ಗೆ ರೈತರು ಉತ್ಸಾಹ ತೋರುತ್ತಿದ್ದು, ಈ ತಳಿಗಳು ಹೆಚ್